ಶಿಕ್ಷಣದ ಜೊತೆ ಆರೋಗ್ಯದ ಕಡೆ ಆದ್ಯತೆ ನೀಡಲು ಸಲಹೆ
ಚಿಕ್ಕಬಳ್ಳಾಪುರ: ಪೌಷ್ಟಿಕತೆಯಿಂದ ಬಹಳಷ್ಟು ಮಕ್ಕಳು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದು ಇದು ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜತೆಗೆ ಅವರ ಆರೋಗ್ಯದ ಕಡೆಗೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಕರ್ನಾಟಕದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ., ಕೆಎಂಎಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಹತ್ತರವಾದ ಯೋಜನೆಯಾದ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಆರೋಗ್ಯವೇ ಮಹಾಭಾಗ್ಯ. ಆದರೆ, ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಂದ ಹೇಗೆ ಸಾಧನೆಯನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ. ಮಗುವಿನ ಆರೋಗ್ಯವನ್ನು ಕಾಪಾಡಿ ನಂತರ ಸಾಧನೆಯನ್ನು ನಿರೀಕ್ಷಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವುದನ್ನು ದೂರ ಮಾಡಬೇಕು. ಇದರಲ್ಲಿ ಸರ್ಕಾರದ ಜತೆಗೆ ಪೋಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಚಿನ್ನಪ್ಪ ಮಾತನಾಡಿ, ಕ್ಷೀರಭಾಗ್ಯ ಯೋಜನೆಯ ಯಶಸ್ಸು ಶಿಕ್ಷಕರ ಮೇಲಿದೆ. ಇದನ್ನರಿತು ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಮಕ್ಕಳ ಆರೋಗ್ಯವನ್ನು ಕಾಪಾಡಿ ಶಿಕ್ಷಣವನ್ನು ನೀಡಲು ಶ್ರಮಿಸಬೇಕೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಕ ಎ. ಅಜಿತ್ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಮಕ್ಕಳು ರಕ್ತಹೀನತೆ ಹಾಗೂ ಏಕಾಗ್ರತೆ ಕೊರತೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಅಪೌಷ್ಟಿಕತೆ ಸಮಸ್ಯೆಯೇ ಪ್ರಮುಖ ಕಾರಣವಾಗಿದ್ದು ಇದನ್ನು ಹೋಗಲಾಡಿಸಲು 1 ರಿಂದ 10 ನೇ ತರಗತಿ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುತ್ತಿಗೆ. ಜಿಲ್ಲೆಯಲ್ಲಿ 1.26 ಲಕ್ಷ ಮಕ್ಕಳು, ಹಾಗೆಯೇ ಜಿಲ್ಲೆಯಲ್ಲಿನ ಆರು ತಿಂಗಳಿಂದ ಆರು ವರ್ಷದ 84,023 ಅಂಗನವಾಡಿ ಮಕ್ಕಳು ಈ ಕ್ಷೀರಭಾಗ್ಯದ ಪ್ರಯೋಜನ ಪಡೆಯಲಿದ್ದಾರೆ. ಒಂದು ಮಗುವಿಗೆ 18 ಗ್ರಾಂ ಹಾಲಿನಪುಡಿಗೆ ಬಿಸಿನೀರು ಹಾಗೂ ಸಕ್ಕರೆ ಮಿಶ್ರಣ ಮಾಡಿ ಬೆಳಗ್ಗೆ ಶಾಲೆಯ ಪ್ರಾರ್ಥನೆಗೆ ಮುನ್ನ ಕೊಡಲಾಗುವುದು ಎಂದರು.
ಜಿ.ಪಂ. ಉಪಾಧ್ಯಕ ರಾಘವೇಂದ್ರ ಹನುಮಾನ್, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆ ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿ ನೀಲಾ ಮಂಜುನಾಥ್, ಚಿಕ್ಕಬಳ್ಳಾಪುರ-ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿದರು.
ಜಿ.ಪಂ. ಸದಸ್ಯ ಮುನೇಗೌಡ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶಶಿಕುಮಾರ್, ನಗರಸಭಾ ಸದಸ್ಯ ಗಜೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್ ಹಾಜರಿದ್ದರು.