ಅಪೌಷ್ಟಿಕತೆ ನಿವಾರಣೆಯಾಗಲಿ'
ಬಂಗಾರಪೇಟೆ: ಬಡತನದಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಅದನ್ನು ತಡೆಯುವ ಸಲುವಾಗಿ ವಾರಕ್ಕೆ 3 ದಿನ 150 ಮಿ. ಲೀ. ಹಾಲು ಉಚಿತವಾಗಿ ಸರ್ಕಾರ ಕೆಎಂಎಫ್ ಮೂಲಕ ಸರ್ಕಾರಿ ಶಾಲೆ ಮಕ್ಕಳಿಗೆ ಸರಬರಾಜು ಮಾಡುತ್ತಿದೆ. ಇದನ್ನು ಮಕ್ಕಳು ಬಳಸಿ ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ಐನೋರಹೊಸಹಳ್ಳಿ ಪಂಚಾಯ್ತಿ ಉಪಾಧ್ಯಕ್ಷ ಆರ್.ವೆಂಕಟೇಶ್ ರೆಡ್ಡಿ ಕರೆ ನೀಡಿದರು.
ಐನೋರಹೊಸಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಒಂಬತ್ತುಗುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆನೆ ಭರಿತ ಹಾಲು ಮಕ್ಕಳಿಗೆ ವಿತರಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ವಾರಕ್ಕೆ 3 ದಿನ ಹಾಲು ಕೊಡುವ ಬದಲಾಗಿ 6 ದಿನ ಕೊಟ್ಟರೆ ಉತ್ತಮ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹಾಲು ಕೊಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದು. ಬೌದ್ಧಿಕ ಹಾಗೂ ದೈಹಿಕವಾಗಿ ಮಕ್ಕಳು ಬೆಳೆಯಲು ಸಹಕಾರಿಯಾಗಲಿದೆ. ಸರ್ಕಾರದ ಈ ಹೊಸ ಯೋಜನೆಯಿಂದ ಪೋಷಕರ ವರ್ಗದಲ್ಲಿ ಸಂತಸ ಉಂಟು ಮಾಡಿದೆ ಎಂದರು.
ಸರ್ಕಾರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಇನ್ನಷ್ಟು ಉತ್ತೇಜನ ನೀಡುತ್ತಿರುವ ಬೆನ್ನಲ್ಲೇ ಮಕ್ಕಳ ಬೌತಿಕ ಹಾಗೂ ಶಾರೀರಿಕ ಶಕ್ತಿಗೆ ಭದ್ರ ಬುನಾದಿ ರೂಪಿಸುವ ನಿಟ್ಟಿನಲ್ಲಿ ಅಕ್ಷರ ದಾಸೋಹದ ಜೊತೆಗೆ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿರುವುದನ್ನು ಅಭಿನಂದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಮಧ್ಯಮ ವರ್ಗದ ಜನರ ಪಾಲಿಗೆ ಆಶಾಕಿರಣವಾಗಿದೆ. 1 ರಿಂದ 10 ನೇತರಗತಿಯ ಮಕ್ಕಳಿಗೆ ಎಲ್ಲಾ ಅನುಕೂಲಗಳನ್ನು ಒದಗಿಸಿದೆ. ಶಿಕ್ಷಣದಿಂದ ದೂರ ಸರಿದಿರುವ ಮಕ್ಕಳು ಉಪಯೋಗಿಸಿಕೊಂಡು ಸಾಕ್ಷರತಾ ಪ್ರಮಾಣ ಹೆಚ್ಚಿಸಬೇಕೆಂದು ಕೋರಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಆನಂದರೆಡ್ಡಿ, ಶಿಕ್ಷಕರಾದ ಆದಿನಾರಾಯಣಪ್ಪ, ಶಶಿಕಲಾ, ನಾರಾಯಣಮ್ಮೈಮತ್ತಿತರರು ಇದ್ದರು.