ಆದಿ ಮಠದ ಮೇಲೆ ಐಟಿ ದಾಳಿ: ಇಂದು ಪ್ರತಿಭಟನೆ
ಕೋಲಾರ: ಆದಿ ಚುಂಚನಗಿರಿ ಮಠಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳ ಹಾಗೂ ಮಠದ ಕಚೇರಿಗಳ ಮೇಲೆ ನಡೆದ ರಾಜಕೀಯ ಪ್ರೇರಿತ ಆದಾಯ ತೆರಿಗೆ ಅಧಿಕಾರಿಗಳ ದಾಳಿಯನ್ನು ಖಂಡಿಸಿ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಶನಿವಾರ ಬೆಳಗ್ಗೆ 10 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಸಮಸ್ತರು ಭಾಗವಹಿಸುವಂತೆ ಜಿಲ್ಲಾ ಒಕ್ಕಲಿಗ ಸಂಘ ಹಾಗೂ ಕೆಂಪೇಗೌಡ ಒಕ್ಕಲಿಗರ ಸಂಘದ ಪ್ರಕಟಣೆ ತಿಳಿಸಿದೆ.
ಇಂದು ಮದ್ಯ ಮಾರಾಟ ನಿಷೇಧ
ಕೋಲಾರ: ಜಿಲ್ಲೆಯಲ್ಲಿ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಆ.3 ರಂದು ಚುನಾವಣೆ ಹಾಗೂ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯುವ ಸಲುವಾಗಿ ಚುನಾವಣೆಯ ದಿನದಂದು ಬೆಳಿಗ್ಗೆ 7ಗಂಟೆಯಿಂದ ಮಧ್ಯರಾತ್ರಿವರೆಗೆ ಹಾಗೂ ಮತ ಎಣಿಕೆ ದಿನವಾದ ಆ.4ರಂದು ಇದೇ ಸಮಯಕ್ಕೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಆದೇಶ ಹೊರಡಿಸಿದ್ದಾರೆ. ಮಾಲೂರು ತಾಲೂಕಿನ ಕೊಂಡಶೆಟ್ಟಿಹಳ್ಳಿ, ಬಂಗಾರಪೇಟೆಯ ಆಲಂಬಾಡಿ ಜ್ಯೋತೇನಹಳ್ಳಿ, ತೊಪ್ಪನಹಳ್ಳಿ, ಮುಳಬಾಗಿಲಿನ ನಂಗಲಿ, ಶ್ರೀನಿವಾಸಪುರದ ತಾಡಿಗೋಳ್, ಯಲ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದೆ.
ಕ್ಷೀರಭಾಗ್ಯ ಯೋಜನೆಗೆ ಶಾಸಕರ ನೆರವು
ಕೋಲಾರ: ನಗರದ ಮೆಥೋಡಿಸ್ಟ್ ಶಿಕ್ಷಣ ಪ್ರಾಥಮಿಕ ಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಶಾಲಾ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮವನ್ನು ಶಾಸಕ ಆರ್.ವರ್ತೂರ್ ಪ್ರಕಾಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂರಾರು ವರ್ಷದ ಇತಿಹಾಸವಿರುವ ಈ ಶಾಲೆಯು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ಮಾಡಲು ಇನ್ನಷ್ಟು ಶ್ರಮಿಸಬೇಕೆಂದರು. ನಗರಸಭಾ ಸದಸ್ಯ ಮುಬಾರಕ್ಮಾತನಾಡಿ, ಮಕ್ಕಳು ಶಿಸ್ತಿಗೆ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು. ಮೆಥೋಡಿಸ್ಟ್ ಸಂಸ್ಥೆಯ ಜಿಲ್ಲಾ ಮೇಲ್ವಿಚಾರಕ ಎಡ್ವಿನ್ ಡೇವಿಡ್ ಕ್ರಿಸ್ಟಫರ್, ಇಟಿಸಿಎಂ ಆಸ್ಪತ್ರೆಯ ಖಜಾಂಚಿ ಜಾನ್ಸನ್ ಸುಂದರ್, ಬಾಲಕಿಯ ಪ್ರೌಢಶಾಲೆಯ ಪ್ರಾಂಶುಪಾಲ ರಜನಿಕಾಂತ್, ಸಹ ಶಿಕ್ಷಣ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆರ್.ಹೇಮಾ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ನಿಲಯಕ್ಕೆ ಶಾಸಕರಿಂದ ಭೂಮಿ ಪೂಜೆ
ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜೆ.ಪಿ. ನಗರದ ಬಳಿ ಸುಮಾರು 2.30 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಗುರುವಾರ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಶಾಸಕರು ಶಿಕ್ಷಣ ಇಲಾಖೆಯ ಆರ್.ಎಂ.ಎಸ್.ಎ ಯೋಜನೆಯಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸದರಿ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ. ಸರ್ಕಾರ ರಾಜ್ಯದಲ್ಲಿ ಶಿಕ್ಷಣವನ್ನು ಅಭಿವೃದ್ಧಿ ಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು. ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಗಮನಹರಿಸಿ ಅಧಿಕಾರಿಗಳು ಹಾಗೂ ಶಿಕ್ಷಕರ ಜೊತೆ ಸಹಕರಿಸಬೇಕೆಂದು ನುಡಿದರು. ಮುಖ್ಯ ಅತಿಥಿ ಜಿ.ಪಂ. ಸದಸ್ಯ ಎಂ.ವಿ. ಕೃಷ್ಣಪ್ಪ ಕ್ಷೇತ್ರದಲ್ಲಿ ಇಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ಸಂತಸದ ವಿಚಾರ, ಶಾಸಕರು ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತರುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದರು. ಜಿ.ಪಂ. ಸದಸ್ಯ ಅಶ್ವತ್ಥಪ್ಪ, ಮಾಜಿ ಸದಸ್ಯರಾದ ಪೋತಲಪ್ಪ, ಚೆಂಡೂರು ವೆಂಕಟೇಶ್, ಬಿ.ಇ.ಒ ರವಿಕುಮಾರ್, ಉಪಯೋಜನಾ ಸಮನ್ವಾಯಾಧಿಕಾರಿ ಮಂಜುನಾಥ್ ಸೇರಿದಂತೆ ಹಲವರಿದ್ದರು.