'ನಿತ್ಯ ಶಿಶು ಮರಣ ಘಟನೆ ತನಿಖೆಗೆ ಆದೇಶ'
ಕ.ಪ್ರ.ವಾರ್ತೆ ಕೋಲಾರ ಆ. 2
ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ಮೂರು ತಿಂಗಳಲ್ಲಿ 173 ಶಿಶುಗಳು ಮತ್ತು 8 ತಾಯಂದಿರು ಸೂಕ್ತ ಚಿಕಿತ್ಸೆ ಇಲ್ಲದೆ ಮೃತಪಟ್ಟಿರುವ ಸುದ್ದು ತಿಳಿದು ಅಘಾತ ಉಂಟಾಗಿದೆ. ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಶೀಘ್ರವೇ ವರದಿ ನೀಡಲು ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ನೇತೃತ್ವದಲ್ಲಿ ತಂಡ ರಚಿಸಿ, ಕೊಪ್ಪಳ ಜಿಲ್ಲೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ ಶಿಶು ಮರಣ ಕುರಿತು 'ಕನ್ನಡಪ್ರಭ'ದಲ್ಲಿ ಪ್ರಕಟವಾಗಿರುವ ವರದಿಯನ್ನು ಗಮನಿಸಿ ಗುರುವಾರವೇ ತಜ್ಞ ವೈದ್ಯರು ಮತ್ತು ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ತಾಯಂದಿರು ಮತ್ತು ಶಿಶುಗಳು ಸಾಯುವುದಕ್ಕೆ ವೈದ್ಯರ ಕೊರತೆ ಕಾರಣವೇ? ಇಲ್ಲವೇ? ಬೇರೆ ಏನಾದರೂ ಸಮಸ್ಯೆಗಳಿವೆಯೇ ಎಂಬುದು ತನಿಖೆಯ ನಂತರ ಗೊತ್ತಾಗಲಿದೆ. ವರದಿ ಬಂದ ಕೂಡಲೇ ಸೂಕ್ತ ಕ್ರಮ ಜರುಗಿಸುತ್ತೇವೆಂದು 'ಕನ್ನಡಪ್ರಭ'ಕ್ಕೆ ಭರವಸೆ ನೀಡಿದರು.
ಶಿಶು ಮರಣ ತಪ್ಪಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕೆಂಬ ನಿಯಮವಿದೆ. ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು ಕರ್ತವ್ಯ. ಆದರೆ ಕೊಪ್ಪಳದಲ್ಲಿ ಏಕೆ ಸಭೆಗಳು ನಡೆದಿಲ್ಲವೆಂಬುದನ್ನು ತನಿಖಾ ತಂಡದ ಅಧಿಕಾರಿಗಳ ಮೂಲಕ ವರದಿ ತರಿಸಿಕೊಂಡು ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದರು.