ನೌಕರರ ಪರಿಷತ್ ಸ್ಥಾನಕ್ಕೆ ಆಯ್ಕೆ
ಚಿಂತಾಮಣಿ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚಿಂತಾಮಣಿ ಪಟ್ಟಣದ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಆರ್.ಪಿ ಎನ್.ವೆಂಕಟಾಚಲಪತಿ ಆಯ್ಕೆಯಾಗಿದ್ದಾರೆ.ಸಿ.ಆರ್.ಪಿ ಎನ್.ವೆಂಕಟಾಚಲಪತಿ 14 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಪ್ರತಿಸ್ಪರ್ಧ್ಧಿಗಳಾದ ಮಂಜುನಾಥ್ 12 ಮತಗಳು ಹಾಗೂ ಕೆ.ರವಣಪ್ಪ 3 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದಾರೆ.
ಇಂದು ನಮೋ ಬ್ರಿಗೇಡ್
ಕೋಲಾರ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬೆಂಬಲಿಸಿ ದೇಶಾದ್ಯಂತ ಮಿಂಚಿನ ಸಂಚಾರ ಮೂಡಿಸಿರುವ ನಮೋ ಬ್ರಿಗೇಡ್ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ನಗರದ ಕೆಇಬಿ ಸಮುದಾಯ ಭವನದಲ್ಲಿ ಆ.3ರಂದು ಬೆಳಗ್ಗೆ 10 ಗಂಟೆಗೆ 'ನಮಗಾಗಿ ಅಲ್ಲ, ನಮ್ಮ ದೇಶಕ್ಕಾಗಿ ನಮೋ ಬ್ರಿಗೇಡ್' ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಮುಖ್ಯ ಭಾಷಣಕಾರರಾಗಿ ಚಕ್ರವರ್ತಿ ಸೂಲಿಬೆಲೆ ಹಾಗೂ ತೇಜಸ್ವಿ ಸೂರ್ಯ ಅವರು ಭಾಗವಹಿಸಲಿದ್ದಾರೆ. ಯುವಕರಲ್ಲಿ ಜಾಗೃತಿ ಮೂಡಿಸಲು ಹಾಗೂ ನರೇಂದ್ರ ಮೋದಿಯ ವಿಚಾರ ಧಾರೆಗಳನ್ನು ತಿಳಿಸಲು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇಂದು ಜಿಲ್ಲಾ ಉಸ್ತುವಾರಿ ಸಭೆ
ಕೋಲಾರ: ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಪಿ.ಎನ್. ಶ್ರೀನಿವಾಸಚಾರಿ ಅವರು ಆ.3 ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕ್ಷೀರಭಾಗ್ಯ ಯೋಜನೆ ಶಾಸಕರಿಂದ ಚಾಲನೆ
ಕೆಜಿಎಫ್: ರಾಜ್ಯ ಸರ್ಕಾರ ಕೈಗೊಂಡಿರುವ 1 ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ಹಾಲು ನೀಡುತ್ತಿರುವುದು ಸ್ವಾಗತಾರ್ಹ. ಈ ಯೋಜನೆಯಿಂದ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದರಿಂದ ಮಕ್ಕಳ ಆರೋಗ್ಯ ಮತ್ತು ಜ್ಞಾನಶಕ್ತಿ ಅಭಿವೃದ್ಧಿಯಾಗಲು ಹೆಚ್ಚು ಸಹಾಯಕಾರಿಯಾಗಲಿದೆ ಎಂದು ಶಾಸಕಿ ವೈ.ರಾಮಕ್ಕ ಹೇಳಿದರು.ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ಷೀರಭಾಗ್ಯ ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು.ಮಾಜಿ ಶಾಸಕ ವೈ.ಸಂಪಂಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೃಷ್ಣಮೂರ್ತಿ ಹಾಗೂ ಶಿಕ್ಷಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಸೀಮೌಲ್ ಮೋಹನ್ ಮಾತನಾಡಿದರು. ಕರ್ನಾಟಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ದೇವೆಂದ್ರಪ್ಪ, ವಿ.ಪ್ರಕಾಶ್, ವೇಣುಗೋಪಾಲ್, ಶಿಕ್ಷಕರ ಸಂಘದ ಅಧ್ಯಕ್ಷ ಅಪಯ್ಯಗೌಡ, ನಗರಸಭಾ ಸದಸ್ಯರಾದ ಅಶೋಕ್, ವಿಜಯಕುಮಾರ್, ಕೆ.ಸಿ. ಮುರಳಿ, ಸ್ಟ್ಯಾನ್ಲಿ, ಗಿರಿಧರ್, ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳಾದ ಪ್ರಮೀಳ, ಪುಷ್ಪವತಿ, ಇ.ಟಿ.ಬ್ಲಾಕ್ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕಿ ಈಶ್ವರಮ್ಮ, ಶಿಕ್ಷಕರು ಸೇರಿದಂತೆ ನಗರದ ಇತರೆ ಅಂಗನವಾಡಿ ಶಿಕ್ಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಬೆಮೆಲ್ ಶಾಲೆಯಲ್ಲಿ ಹಾಲು ವಿತರಣೆ
ಕೆಜಿಎಫ್: ಕೆಜಿಎಫ್ನ ಬೆಮೆಲ್ ಸರ್ಕಾರಿ ಆಂಗ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯ ಮಾಣಿಕ್ಯಂ ಅವರು ಶಾಲಾ ಮಕ್ಕಳಿಗೆ ಕೆನೆಭರಿತ ಹಾಲು ನೀಡುವ ಮೂಲಕ ಚಾಲನೆ ಮಾಡಿದರು.ಶಾಲೆಯ ಮುಖ್ಯ ಶಿಕ್ಷಕ ಮರಿರಾಜು, ಸಹ ಶಿಕ್ಷಕ ಗೋವಿಂದರಾಜು ಹಾಗೂ ಶಾಲೆಯ ಇತರೆ ಶಿಕ್ಷಕರು ಹಾಜರಿದ್ದರು.