'ಮಕ್ಕಳಲ್ಲಿ ಕ್ರೀಡಾಭಿಮಾನ ಬೆಳೆಸಿ'
ಚಿಂತಾಮಣಿ: ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ, ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರೀಡಾಭಿಮಾನ ಬೆಳೆಸಬೇಕು ಎಂದು ಶಿಕ್ಷಕ ಕೆ.ವಿ.ಚೌಡಪ್ಪ ಕಿವಿಮಾತು ಹೇಳಿದ್ದಾರೆ. ತಾಲೂಕಿನ ಚಿಲಕಲನೇರ್ಪು ಹೋಬಳಿ ಮಟ್ಟದ 2013-14ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕು ಕ್ರೀಡಾಧಿಕಾರಿ ನಾಗರಾಜ್ ಮಾತನಾಡಿ, ಕ್ರೀಡೆಗಳ ಉಪಯುಕ್ತದ ಬಗ್ಗೆ ಮತ್ತು ಉತ್ತಮ ಆರೋಗ್ಯ ಪಡೆಯಲು ಮಕ್ಕಳಲ್ಲಿ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕೆಂದು ನುಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಎನ್.ದಾಮೋಧರರೆಡ್ಡಿ, ಮರಬಳ್ಳಿ ಎನ್.ರಮೇಶ್,ಪ್ರಭಾವತಮ್ಮ, ಸಿ.ಆರ್.ಪಿ ಶಿವರಾಮ್ ಮತ್ತಿತರರು ಮಾತನಾಡಿದರು. ವಿವಿಧ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
108 ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ
ಚಿಂತಾಮಣಿ: ಬಡ ರೋಗಿಗಳಿಗೆ ಚಿಕಿತ್ಸೆ ಸಿಗದೆ ಪರದಾಡುವಂತಹ ದುಸ್ಥಿತಿಗೆ ನಿರ್ಲಕ್ಷವೇ ಕಾರಣವಾಗಿದ್ದು ಸರ್ಕಾರ ಈ ಕೂಡಲೇ 108 ನೌಕರರ ಬೇಡಿಕೆಗಳನ್ನು ಈಡೇರಿಸಿ ಸೇವೆಗೆ ನಿಯೋಜನೆಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಕರವೇ ಕಾರ್ಯಕರ್ತರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿರುವ 108 ಸಿಬ್ಬಂದಿಯ ಸೇವೆ ತುರ್ತು ಸಂದರ್ಭಗಳಲ್ಲಿ ಗ್ರಾಮೀಣ ಭಾಗದ ಬಡ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಾಧ್ಯವಾದಷ್ಟು ಜನಪರ ಸೇವೆ ಕೈಗೊಂಡಿರುವ ನೌಕರರ ಸೇವೆಯನ್ನು ಪರಿಗಣಿಸಿ ಸರ್ಕಾರ ಈ ಕೂಡಲೇ ಸೇವೆ ನಿಯೋಜನೆಗೊಳಿಸುವಂತೆ ಕಾರ್ಯಕರ್ತರು ಒತ್ತಾಯಿಸಿದರು. ಕರವೇ ತಾಲೂಕು ಅಧ್ಯಕ್ಷ ಆರ್.ಪಂಕಜ್, ಜಿಲ್ಲಾ ಉಪಾಧ್ಯಕ್ಷ ಊಲವಾಡಿ ಮುನಿನಾರಾಯಣಪ್ಪ, ನಗರ ಘಟಕದ ಅಧ್ಯಕ್ಷ ವೆಂಕಟೇಶಬಾಬು, ಕರವೇ ಮುಖಂಡರಾದ ವೆಂಕಟಗಿರಿಕೋಟೆ ಆಸೀಫ್, ಕೆ.ಆರ್.ನರಸಿಂಹಪ್ಪ, ಜನಾರ್ಧನ್, ಕಾರ್ತಿಕ್, ಮುಸ್ತಾಫ, ಮುಜಾಯಿಲ್ ಮೊಹಮದ್, ಅರುಣ್‌ಕುಮಾರ್ ಸೇರಿದಂತೆ ಹಲವರಿದ್ದರು.