ವಿಲೇವಾರಿ ಕಾಣದ ಅನುಪಯುಕ್ತ ವಾಹನ
ಕ.ಪ್ರ.ವಾರ್ತೆ ಕೋಲಾರ ಆ. 2
ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸರ್ಕಾರ ಒದಗಿಸಿದ್ದ ವಾಹನಗಳು ಅನೇಕ ಸಾರಿ ದುರಸ್ತಿಗೊಂಡರೂ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿಯುತ್ತಿವೆ.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸುಮಾರು ವರ್ಷಗಳಿಂದ ಅನುಪಯುಕ್ತ ವಾಹನಗಳು ವಿಲೇವಾರಿಯಾಗದೆ ಇರುವುದರಿಂದ ಸರ್ಕಾರಕ್ಕೆ ಸಿಗಬೇಕಾದ ಅಲ್ಪ ಸ್ವಲ್ಪ ಆದಾಯ ಕೈತಪ್ಪಿ ಹೋಗುವಂತಾಗಿದೆ.
ಗುಜರಿಗೂ ಯೋಗ್ಯವಾಗಿಲ್ಲ: ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿಗೆ ಸೇರಿದ ಅನುಪಯುಕ್ತ ವಾಹನಗಳನ್ನು ಹರಾಜು ಹಾಕಿದಲ್ಲಿ ಸರ್ಕಾರಕ್ಕೆ ಸ್ವಲ್ಪಮಟ್ಟಿಗಾದರೂ ಹಣ ಸಂದಾಯವಾಗುತ್ತದೆ. ಆದರೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಟೆಂಡರ್ ಕರೆಯಲು ಮೀನ-ಮೇಷ ಎಣಿಸುತ್ತಿರುವುದರಿಂದ ವಾಹನಗಳು ಗುಜರಿ ಅಂಗಡಿಗಳ ಮಾಲೀಕರು ಸಹ ತಿರಸ್ಕರಿಸುವಂತಾಗುತ್ತಿದೆ.
ಅಧಿಕಾರಿಗಳಿಗೆ ಆಸಕ್ತಿಯೇ ಇಲ್ಲ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಕಳ್ಳತನದ ವಾಹನಗಳು ಸೇರಿದಂತೆ ವಿವಿಧ ವಾಹನಗಳನ್ನು ಹರಾಜು ಮಾಡಲಾಗುತ್ತಿದ್ದು ಉಳಿದ ಇಲಾಖೆಗಳು ಅನುಪಯುಕ್ತ ವಾಹನಗಳ ವಿಲೇವಾರಿಗೆ ಆಸಕ್ತಿ ತೋರದಿರುವುದು ಜಿಜ್ಞಾಸೆ ಮೂಡಿಸಿದೆ.
ವಿಲೇವಾರಿ ಮಾಡಬೇಕಿದೆ: ಅನುಪಯುಕ್ತ ವಾಹನಗಳಲ್ಲಿನ ಇಂಜಿನ್, ಟೈರ್ಗಳು ಸೇರಿದಂತೆ ಮತ್ತಿತರ ಸಲಕರಣೆಗಳು ಮಾತ್ರ ಮಾಯವಾಗಿದ್ದು ಬೆದರು ಗೊಂಬೆಯಾಗಿರುವ ಕಬ್ಬಿಣದ ಕವಚ, ಇನ್ನಿತರ ವಸ್ತುಗಳನ್ನು ವಿಲೇವಾರಿ ಮಾಡಿದಲ್ಲಿ ಸರ್ಕಾರಕ್ಕೆ ಸ್ವಲ್ಪವಾದರೂ ಹಣ ಸಂದಾಯವಾದಂತಾಗುತ್ತದೆ.
'ಕ್ಷೀರಭಾಗ್ಯ ಯೋಜನೆ ಸದುಪಯೋಗವಾಗಲಿ'
ಚಿಂತಾಮಣಿ: ಬಡ ಮಕ್ಕಳು ಅನುಕೂಲಕ್ಕಾಗಿ ಸರ್ಕಾರ 'ಕ್ಷೀರಭಾಗ್ಯ' ಯೋಜನೆ ಜಾರಿಗೆ ಮಾಡಿರುವುದು ಸ್ವಾಗತಾರ್ಹ ಎಂದು ಮುಖ್ಯ ಶಿಕ್ಷಕ ಕೆ.ಓಬಯ್ಯ ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿಭಾಗದ ಶಾಲಾ ಮಕ್ಕಳಿಗೆ ಶಾಲೆಯ ಆವರಣದಲ್ಲಿ ಕ್ಷೀರ ಭಾಗ್ಯ ಯೋಜನೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರೈತಾಪಿ ವರ್ಗದ ಜನರು ಹೈನುಗಾರಿಕೆಯನ್ನೇ ನಂಬಿ ಉಭಯ ಜಿಲ್ಲೆಗಳಲ್ಲಿ ಯಾವುದೇ ನದಿ ಹಾಗೂ ಕೆರೆ, ಕುಂಟೆಗಳ ನೀರಿನ ವ್ಯವಸ್ಥೆ ಇಲ್ಲವಾದರೂ ಆರ್ಥಿಕ ಮಟ್ಟ ಸುಧಾರಿಸಲು ಡೈರಿಗಳಿಗೆ ಹಾಲು ಹಾಕಿದರೆ ಅದೇ ಹಾಲನ್ನು ಮಕ್ಕಳಿಗೆ ಕೊಡುತ್ತಿರುವುದು ಶ್ಲಾಘನೀಯವೆಂದು ನುಡಿದರು.
ಉಪನ್ಯಾಸಕ ವಿ.ನಾರಾಯಣಸ್ವಾಮಿ ಮಾತನಾಡಿ, ಕ್ಷೀರಭಾಗ್ಯ ಯೋಜನೆ ಸದುಪಯೋಗ ಪಡಿಸಿಕೊಂಡು ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯುವಂತೆ ಕಿವಿಮಾತು ಹೇಳಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಹೆಚ್.ಮಂಜುನಾಥ್ 'ಕ್ಷೀರಭಾಗ್ಯ' ಯೋಜನೆಯ ಹಾಲನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ಶಿಕ್ಷಕರಾದ ಸರಸ್ವತಿ, ಲಲಿತ ಧರ್ಮಪ್ಪ ನಾಯಕ, ಬಿ.ಬೈರಾರೆಡ್ಡಿ, ಆಂಜಪ್ಪ, ಲಕ್ಷ್ಮಿಪತಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.