ಶಿಡ್ಲಘಟ್ಟ ತಾಲೂಕು ಬರಪೀಡಿತ ಪ್ರದೇಶವಾಗಿ ಘೋಷಿಸಲು ಆಗ್ರಹ
ಶಿಡ್ಲಘಟ್ಟ: ಸತತ ಬರಗಾಲದಿಂದ ತತ್ತರಿಸುತ್ತಿರುವ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್. ಮುನಿಯಪ್ಪ ಹಾಗೂ ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪಿಎಲ್ಡಿ ಬ್ಯಾಂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆ ಬೆಳೆಯಾಗದೇ ರೈತರು ಕಂಗಾಲಾಗಿ ಆರ್ಥಿಕವಾಗಿ ಸಂಕಷ್ಟದದಲ್ಲಿ ಸಿಲುಕಿದ್ದಾರೆ. ಮಳೆಯಿಲ್ಲದೇ ಜನಸಾಮನ್ಯರು ಸೇರಿದಂತೆ ಜಾನುವಾರುಗಳು ಪರದಾಡುತ್ತಿವೆ. ಕೂಡಲೇ ಸರಕಾರ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಮಳೆ ಬರುವ ನಿರೀಕ್ಷೆಯಲ್ಲಿ ರೈತರು ಶೇ.75 ರಷ್ಟು ಬಿತ್ತನೆ ಕಾರ್ಯ ಮುಗಿಸಿದ್ದರೂ ಶೇ.25ರಷ್ಟು ಮೊಳಕೆ ಹೊಡೆದಿಲ್ಲ. 1200-1500 ಅಡಿಗಳಿಗೆ ಕೊರೆದರೂ ನೀರು ಲಭಿಸುತ್ತಿಲ್ಲ. ಇದರಿಂದ ದನ-ಕರುಗಳಿಗೆ ಮೇವಿನ ಅಭಾವದಿಂದ ಹಸುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮೇವಿನ ಅಭಾವದಿಂದ ಜಾನುವಾರುಗಳನ್ನು ಮಾರಾಟ ಮಾಡಲು ರೈತರು ಸಿದ್ಧರಿದ್ದರೂ ಖರೀದಿ ಮಾಡಲು ಯಾರೂ ಮುಂದಾಗುತ್ತಿಲ್ಲ. ಸರ್ಕಾರ ಕೂಡಲೇ ಮಳೆಯ ಪ್ರಮಾಣ ಆಧರಿಸಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿಯ ಕೇಂದ್ರದಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.
ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು
ಶಿಡ್ಲಘಟ್ಟ: ವಿದ್ಯುತ್ ಕಂಬ ಹತ್ತಿ ಕೆಲಸದಲ್ಲಿ ನಿರತನಾಗಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ರಹಮತ್ ನಗರದಲ್ಲಿ ನಡೆದಿದೆ.ಶಂಕರ್ ಮೃತ ವ್ಯಕ್ತಿ. ಮೊದಲು ಬೆಸ್ಕಾಂನಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಬಿಟ್ಟ ನಂತರ ಗುತ್ತಿಗೆದಾರ ನಾಗರಾಜ್ ಎಂಬವರ ಬಳಿ ಎರಡೂವರೆ ತಿಂಗಳಿನಿಂದ ಕೆಲಸಕ್ಕೆ ಸೇರಿದ್ದರು.
ಕೇಂದ್ರ ಸರ್ಕಾರದ ಆರ್ಎಪಿಡಿಪಿಆರ್ಪಿ ಯೋಜನೆಯಾದ ಕಂಬಗಳನ್ನು ಬದಲಾಯಿಸುವುದು, ಟಿ.ಸಿ. ಹಾಕುವುದು, ಕೇಬಲ್ ಬದಲಾಯಿಸುವುದು ಮೊದಲಾದ ಪ್ರಾಜೆಕ್ಟ್ಗಳನ್ನು ಬೆಂಗಳೂರಿನ ಶಾಲಕಾ ಕಂಪೆನಿಗೆ ಒಪ್ಪಸಲಾಗಿತ್ತು. ಕಂಪೆನಿಯು ಶಿಡ್ಲಘಟ್ಟದ ಸ್ಥಳೀಯ ಗುತ್ತಿಗೆದಾರ ನಾಗರಾಜ ಅವರಿಗೆ ಈ ಕಾರ್ಯ ಒಪ್ಪಿಸಲಾಗಿತ್ತು.
11 ಜನರ ತಂಡದೊಂದಿಗೆ ನಾಗರಾಜ್ ತೆರಳಿದ್ದು, ಬೆಳ್ಳಿಗೆ 11.30ಕ್ಕೆ ರಹಮತ್ ನಗರದಲ್ಲಿ ಕಂಬಕ್ಕೆ ಹತ್ತಿದ ಕೇಶವ ವಿದ್ಯುತ್ ಸ್ಪರ್ಶದಿಂದ ಕಂಬದಲ್ಲೇ ಬಿದ್ದು ಒದ್ದಾಡುದ್ದರು. ಆಗ ನೋಡಿದ ಸ್ಥಳಿಯರು ಶಂಕರ್ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಶಂಕರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.ಮೃತನ ಕುಟುಂಬಕ್ಕೆ ಗುತ್ತಿಗೆದಾರ ನಾಗರಾಜ್ ಅವರು 4 ಲಕ್ಷ ಪರಿಹಾರ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಶಿಡ್ಲಘಟ್ಟದ ಬೆಸ್ಕಾಂನ ಎ.ಡಬ್ಯು.ಡಿ ಹರಿಬಾಬು ತಿಳಿಸಿದ್ದಾರೆ. ಬೆಸ್ಕಾಂನಲ್ಲಿ ಆವಕಾಶವಿದ್ದರೆ ಪರಿಹಾರವನ್ನು ಕೊಡಿಸಲು ಪ್ರಯತ್ನಿಸುವುದಾಗಿಯೂ ತಿಳಿಸಿದ್ದಾರೆ.ಬೆಸ್ಕಾಂನ ಅಸಿಸ್ಟೆಂಟ್ ಎಂಜಿನಿಯರ್ ಅನ್ಸರ್ ಪಾಷಾ ಹಾಗೂ ಗುತ್ತಿಗೆದಾರ ನಾಗರಾಜ್ ಮೇಲೆ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.