ಸೇತುವೆ ಕಳಪೆ ಕಾಮಗಾರಿ: ನಗರಸಭಾ ಸದಸ್ಯ ಆರೋಪ
ಚಿಂತಾಮಣಿ: ಕೇವಲ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ಪಟ್ಟಣದ ಕನಂಪಲ್ಲಿ ಕೆರೆ ಕಟ್ಟೆಯ ಸೇತುವೆ ಸಂಪೂರ್ಣವಾಗಿ ಕಳಪೆ ಕಾಮಗಾರಿಯಿಂದ ಕೂಡಿದ್ದು ಶಿಥಿಲತೆಯತ್ತ ಸಾಗಿದೆ.
ಈ ನಿಟ್ಟಿನಲ್ಲಿ ಸೇತುವೆ ಅಪಾಯಕಾರಿ ಹಂತಕ್ಕೆ ತಲುಪಿದ್ದು ಈ ಮಾರ್ಗವಾಗಿ ಜನತೆ-ವಾಹನ ಸಂಚರಿಸಲು ಹಿಂದೇಟು ಹಾಕುವ ದುಸ್ಥಿತಿ ಎದುರಾಗಿದೆ ಎಂದು ವಾರ್ಡ್ 12ರ ನಗರಸಭೆ ಸದಸ್ಯ ಸಿ.ಎನ್.ಮಂಜುನಾಥ್, ಮುಖಂಡರಾದ ಶಾಂತಿನಗರ ಅಶ್ವಥರೆಡ್ಡಿ, ಎ.ರಾಬರ್ಟ್ ಆರೋಪಿಸಿದ್ದಾರೆ.
ನೀಡಿರುವ ಹೇಳಿಕೆಯಲ್ಲಿ ಕನಂಪಲ್ಲಿ ಕೆರೆಗೆ ನಾರಾಯಣಹಳ್ಳಿ, ದೊಡ್ಡಿಕೊಂಡ್ರಹಳ್ಳಿ ಸೇರಿದಂತೆ ಸುತ್ತಮುತ್ತಲ ಹಲವಾರು ಗ್ರಾಮಗಳಿಂದ ಹಾಗೂ ಹೊಂದಿಕೊಂಡಿರುವ ಬೆಟ್ಟದ ತಪ್ಪಲಿನಿಂದ ಮಳೆ ನೀರು ಮತ್ತು ಜೌಗು ನೀರು ಸರಿ ಸುಮಾರು 3-4 ತಿಂಗಳ ಕಾಲ ಹರಿದು ಬರಲಿದೆ. ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕೆರೆ ಕಟ್ಟೆ ಸೇತುವೆ ಅಡಿಪಾಯ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಹರಿದು ಬರುವ ಜೌಗು ನೀರು ಸೇತುವೆಯ ಮೂಲಕವೇ ಹಾದು ಹೋಗಬೇಕಾದ ಅನಿವಾರ್ಯತೆಯಿದೆ. ಆದರೆ ಸೇತುವೆಯ ಅಡಿಪಾಯ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿ ಬಹುತೇಕವಾಗಿ ಶಿಥಿಲಗೊಂಡಿದೆ.
ದುರಸ್ತಿಗೊಳಿಸಿ: ಈ ಕಾಮಗಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿ, ಸೇತುವೆ ಅಡಿಪಾಯ ಮತ್ತಿತರೆಯನ್ನು ಸರಿಪಡಿಸಿ, ಆ ಭಾಗದ ಮೂಲಕ ಹಾದು ಹೋಗುವ ಜನರಿಗೆ ಆಗುತ್ತಿರುವ ಭೀತಿಯನ್ನು ದೂರಾಗಿಸುವುದರ ಜೊತೆಗೆ ಸಂಬಂಧಪಟ್ಟ ಇಲಾಖೆಗೆ ಮುಂದಿನ ದಿನಗಳಲ್ಲಿ ಆಗುವ ನಷ್ಟವನ್ನು ದೂರಾಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.