' ಕೆರೆ ನೀರು ಸಂಗ್ರಹದಿಂದ ಅಂತರ್ಜಲ ವೃದ್ಧಿ'
ಮಾಲೂರು: ತಾಲೂಕಿನಾದ್ಯಂತ ಕೆರೆಗಳಿಗೆ ಹರಿದು ಬರುವ ಕಾಲುವೆಗಳನ್ನು ಪುನಃ ನಿರ್ಮಾಣಗೊಳಿಸಿ ಕೆರೆಗಳಲ್ಲಿ ನೀರಿನ ಸಂಗ್ರಹಿಸುವ ಮೂಲಕ ತಾಲೂಕಿನ ಅಂತರ್ಜಲ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ತಾಲೂಕಿನ ಆನೇಪುರ ಹೋಬಳಿಯ ಗಡಿ ಭಾಗದ ಮಾರ್ಕಂಡೇಯ ಬೆಟ್ಟದಲ್ಲಿ ಶನಿವಾರ 1.20 ಕೋಟಿ ವೆಚ್ಚದ ಕಾಲುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ತೀವ್ರವಾಗಿ ಕಾಡುತ್ತಿರುವ ನೀರಿನ ಸಮಸ್ಯೆ ನೀಗಿಸಲು ಈ ಕಾಲುವೆ ನಿರ್ಮಾಣ ಸಹಕಾರಿಯಾಗಲಿದೆ. ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.
ತಾಲೂಕಿನ ಎಲ್ಲೆಡೆ ಇರುವ ಕೆರೆಗಳ ಕಾಲುವೆಗಳಲ್ಲಿರುವ ಒತ್ತುವರಿಗಳನ್ನು ಯಾವ ಒತ್ತಡಕ್ಕೂ ಮಣಿಯದೆ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು ಎಂದರು.
ಸಣ್ಣ ನೀರಾವರಿ ಇಲಾಖೆ ಎಇಇ ಪಾಪೇಗೌಡ ಮಾತನಾಡಿ, ಮಾರ್ಕಂಡೇಯ ಬೆಟ್ಟದಿಂದ ತೊಟ್ಟಗೊಂಡಹಳ್ಳಿ ವರಗಿನ 9.4 ಕಿ.ಮೀ. ಹಾಗೂ ಪಟ್ಟಣದ ದೊಡ್ಡ ಕೆರೆಯಿಂದ ಬರಗೂರು ಕೆರೆ ತನಕ ಹಾಲಿ ಇರುವ ಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸಿ ಸುಸಜ್ಜಿತ ಕಾಲುವೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಕಾಲುವೆಗಳಲ್ಲಿರುವ ಒತ್ತುವರಿಗಳನ್ನು ಗುರ್ತಿಸಲಾಗಿದೆ. ಯಾವುದೇ ಮುಲಾಜಿಲ್ಲದೆ ತೆರವು ಮಾಡಿಸಲಾಗುವುದು ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ನಂಜೇಗೌಡ, ಆನೇಪುರ ಹನುಮಂತಪ್ಪ, ಪಾಪಣ್ಣ, ಪ್ರದೀಪ್ ರೆಡ್ಡಿ, ಇಲಾಖೆಯ ಅಭಿಯಂತರ ಸುರೇಶ್, ಸಿ.ಎಂ. ವೆಂಕಟೇಶಪ್ಪ, ವೇಣುಗೋಪಾಲ್, ಗುತ್ತಿಗೆದಾರ ರಾಜಶೇಖರ್, ಹರ್ಷ, ದೇವರಾಜ್ ಸೇರಿದಂತೆ ಮತ್ತಿತರರು ಇದ್ದರು.