ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆಸುವಂತಿಲ್ಲ
ಕನ್ನಡಪ್ರಭ ವಾರ್ತೆ ಕೋಲಾರ ಆ.3
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಇನ್ನು ಮುಂದೆ ಗಂಗಾಕಲ್ಯಾಣ ಯೋಜನೆ ಸೇರಿದಂತೆ ಖಾಸಗಿಯವರು ಅನುಮತಿ ಇಲ್ಲದೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆದಲ್ಲಿ ಕೂಡಲೇ ಮೊಕದ್ದಮೆ ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಾಚಾರಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ತಾಲೂಕಿನ ಮಡೇರಹಳ್ಳಿ ಕೆರೆಯಲ್ಲಿ ವಂಡರ್ಲಾ ಪ್ರಾರಂಭಿಸಲು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಿದೆ ಎಂಬ ವಿಷಯ ಪ್ರಸ್ತಾಪಕ್ಕೆ ಬಂದಾಗ ಯಾವುದೇ ಕಾರಣಕ್ಕೂ ವಂಡರ್ಲಾ ಪ್ರಾರಂಭಿಸಲು ಅವಕಾಶ ಕೊಡಬಾರದೆಂದು ಕೂಡಾ ಅಧಿಕಾರಿಗಳಿಗೆ ಆದೇಶಿಸಿದರು.
ವಂಡರ್ಲಾ ಅಂತಹವುಗಳಿಗೆ ಕೊಳವೆ ಬಾವಿಗಳಿಂದ ನೀರು ಪೂರೈಕೆಯಾದಲ್ಲಿ ಈಗಾಗಲೇ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ಜನರಿಗೆ ಮತ್ತಷ್ಟು ಅನ್ಯಾಯ ಮಾಡಿದಂತಾಗುತ್ತದೆ. ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಖಡಕ್ ಆಗಿ ಹೇಳಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ಅನೇಕ ಸಾರಿ ಹೇಳಿದ್ದೇನೆ, ಆದರೂ ಸೂಚನೆ ಪಾಲಿಸದಿರುವುದು ನೋಡಿದಲ್ಲಿ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದಾಗೆ ಕಾಣುತ್ತಿಲ್ಲವೆಂದು ತಿಳಿಸಿದ ಉಸ್ತುವಾರಿ ಕಾರ್ಯದರ್ಶಿಗಳು, ಪ್ರಗತಿ ಪರಿಶೀಲನೆಗೆ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳನ್ನು ಗಮನಿಸಿದರೆ ಜಿಲ್ಲೆಯ ಸ್ಥಿತಿ ಅರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ನೀರಿಗೆ ಲೆಕ್ಕ ಇಡಿ: ಜಿಲ್ಲೆಯಲ್ಲಿ 122 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಆಗುತ್ತಿರುವುದನ್ನು ಸಂಬಂಧಪಟ್ಚ ಗ್ರಾಪಂ ಪಿಡಿಓಗಳು ಲಾಗ್ ಪುಸ್ತಕದಲ್ಲಿ ನಮೂದಿಸಿ ಲೆಕ್ಕ ತೆಗೆದುಕೊಳ್ಳಬೇಕೆಂದರು.
ಕೋಲಾರ ನಗರದಲ್ಲಿ 156 ಕೊಳವೆ ಬಾವಿಗಳನ್ನು ಕೊರೆಸಿದ್ದು ಅವುಗಳಲ್ಲಿ 134 ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗಿದ್ದರೂ, 31 ವಾರ್ಡ್ಗಳಿಗೆ ಇನ್ನೂ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡುತ್ತಿರುವುದು ಅನುಮಾನ ಮೂಡಿಸಿದೆ. ಕೂಡಲೇ ಟ್ಯಾಂಕರ್ಗಳನ್ನು ಕಡಿಮೆ ಮಾಡಬೇಕೆಂದು ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಶೇ.40ರಷ್ಟು ಉಳುಮೆ ಕಾರ್ಯ ನಡೆದಿದ್ದು, 28 ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಗಳು ಆಗಸ್ಟ್ ಅಂತ್ಯದವರೆಗೂ ಬಿತ್ತನೆ ಮಾಡಲು ಅವಕಾಶಗಳಿದ್ದು ರೈತರಿಗೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ಸಮಸ್ಯೆ ಇರುವುದಿಲ್ಲವೆಂದು ಅಧಿಕಾರಿಗಳು ಸಭೆಗೆ ತಿಳಿಸಿದಾಗ ಮುಂಜಾಗ್ರತೆಯಾಗಿ ಮಿನಿಕಿಟ್ಗಳನ್ನು ರೈತರಿಗೆ ವಿತರಿಸಿ ಮೇವು ಬೆಳೆಯಲು ಅವಕಾಶ ಮಾಡಿ ಎಂದರು.
ಅಧಿಕಾರಿಗಳಿಗೆ ತರಾಟೆ: ನರೇಗಾ ಯೋಜನೆಯಲ್ಲಿ ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳಲ್ಲಿ 1.91 ಲಕ್ಷ ಜನರು ಉದ್ಯೋಗಕ್ಕಾಗಿ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆಂದು ಜಿ.ಪಂ ಸಿಇಒ ಎಂ.ಎಸ್.ಝಲ್ಫಿಖಾರ್ ಉಲ್ಲಾ ತಿಳಿಸಿದರು.
ಜಿಲ್ಲೆಯಲ್ಲಿ ನರೇಗಾ ದೊಡ್ಡ ಸ್ಟೋರಿಯಾಗಿದೆ, ಕೇವಲ ಕ್ರಿಯಾಯೋಜನೆಗಳು ಮಾತ್ರ ಆಗುತ್ತಿದೆ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ 156 ಕಾಮಗಾರಿಗಳು ನಡೆಯುತ್ತಿದೆ ಎಂಬ ವರದಿಯನ್ನು ನೀಡಿದ್ದೀರಿ, ಆದರೆ ಕಾಮಗಾರಿಗಳು ಎಲ್ಲಿ ಎಷ್ಟು ನಡೆಯುತ್ತಿವೆ ಎಂದು ಮಾಹಿತಿ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸಿ ವಿರುದ್ಧ ಗರಂ: ನಿಮ್ಮ ಬಗ್ಗೆ ಸಾಕಷ್ಟು ದೂರುಗಳಿವೆ, ಜನತೆಯ ಕೆಲಸ ನೆಟ್ಟಗೆ ಮಾಡುತ್ತಿಲ್ಲವೆಂದು ಆರೋಪ ಕೇಳಿ ಬರುತ್ತಿದೆ. ಕಡೇ ಪಕ್ಷ ಸರ್ಕಾರದ ಜಾಗವನ್ನು ಅಗತ್ಯವಿರುವ ಇಲಾಖೆಗಳಿಗೆ ನೀಡಲು ನಿಮಗೆ ಏನು ತೊಂದರೆ ಎಂದು ಉಪವಿಭಾಗಾಧಿಕಾರಿಯ ವಿರುದ್ಧ ಸಿಡಿಮಿಡಿಗೊಂಡರು.
ಡಿಡಿಪಿಐ ಪದ್ಮನಾಭ್ ಮಾತನಾಡಿ, ಮುಳಬಾಗಲು ಸಮೀಪದ ತಾತಿಕಲ್ಲು ಗ್ರಾಮದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಆದರ್ಶ ವಸತಿ ನಿಲಯವನ್ನು ನಿರ್ಮಾಣ ಮಾಡಲು ಅನುದಾನ ಮತ್ತು ಟೆಂಡರ್ ಸಹ ಆಗಿದೆ. ಆದರೆ ತಾವು ನೋಡಿರುವ ಜಮೀನು ಮಂಜೂರಾತಿಗಾಗಿ ಉಪವಿಭಾಗಾಧಿಕಾರಿಗಳಿಗೆ ಕಡತವನ್ನು ಕಳುಹಿಸಿ ಅನೇಕ ದಿನಗಳಾದರೂ ವಿಲೇವಾರಿ ಆಗಿಲ್ಲ ಎಂದು ಹೇಳಿದಾಗ ಕಾರ್ಯದರ್ಶಿಗಳು, ಈಗಾಗಲೇ ಉಪವಿಭಾಗಾಧಿಕಾರಿಗಳ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಸರ್ಕಾರಿ ಕೆಲಸದ ಜಾಗಕ್ಕೆ ಏಕೆ ಅಡ್ಡ ಹಾಕಿದ್ದೀರಾ, ಕೂಡಲೇ ಕಡತವನ್ನು ವಿಲೇವಾರಿ ಮಾಡಿಕೊಡುವಂತೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಾಂತ್ ಮಾತನಾಡಿ ಜಿಲ್ಲೆಯಲ್ಲಿ 62 ಡೆಂಘೀ ಪ್ರಕರಣಗಳು ಹಾಗೂ 57 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದು ಯಾರೂ ಸತ್ತಿರುವುದಿಲ್ಲವೆಂದು ಸಭೆಗೆ ತಿಳಿಸಿದರು.
ಉಸ್ತುವಾರಿ ಕಾರ್ಯದರ್ಶಿಗಳು ಮಾತನಾಡಿ ಪ್ರತಿಯೊಂದು ಗ್ರಾಮಕ್ಕೂ ಸ್ವಚ್ಛತೆಗಾಗಿ ಹತ್ತು ಸಾವಿರ ಹಣ ನೀಡಿದ್ದು ಇದನ್ನು ಉಪಯೋಗಿಸಿಕೊಂಡು ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಿ ಎಂದು ಹೇಳಿದರು.
ಜಿಲ್ಲೆಯಲ್ಲಿ ರಸ್ತೆಗಳು ಹದಗೆಟ್ಟಿದ್ದು ಎಲ್ಲಿ ನೋಡಿದರು ಗುಣಿಗಳು ಬಿದ್ದಿವೆ. ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಗುಣಿಗಳನ್ನು ಇನ್ನು ಎರಡು ತಿಂಗಳೊಳಗೆ ಮುಚ್ಚಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.