ಸರ್ಕಾರಿ ಕಚೇರಿ ಲೋಕಾರ್ಪಣೆಗೆ ಕಡೆಗೂ 23ರಂದು ಮೂಹೂರ್ತ
ಚಿಕ್ಕಬಳ್ಳಾಪುರ: ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಗರದ ಹೊರವಲಯದ ಅಣಕನೂರು ಗ್ರಾಮದ ಬಳಿ ಹೈಟೆಕ್ ಮಾದರಿಯಲ್ಲಿ ನಿರ್ಮಿಸಿರುವ ಸರ್ಕಾರಿ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಉದ್ಘಾಟನೆಗೆ ಕೊನೆಗೂ ಮುಹೂರ್ತ ನಿಗಧಿ ಆಗಿದೆ.
ಅದೇ ರೀತಿ ಜಿಲ್ಲಾ ಕೇಂದ್ರದಲ್ಲಿ ಕೇವಲ ಮಾತುಗಳೇ ಹೇಳುತ್ತ ಕಾಲ ಕಳೆದುಕೊಂಡು ಬಂದಿದ್ದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೂ ಇದೀಗ ಚಾಲನೆ ಸಿಗುವ ಕಾಲ ಬಂದಿದೆ.
ನಗರದ ಹೊರ ವಲಯದಲ್ಲಿರುವ ಎಸ್ಜೆಸಿಐಟಿ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಆ.23 ರಂದು ಚಿಕ್ಕಬಳ್ಳಾಪುರದಲ್ಲಿ ಸರ್ಕಾರಿ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಉದ್ಘಾಟನೆ ಹಾಗೂ ನೂತನ ಬಸಸ್ನಿಲ್ದಾಣದ ಶಂಕುಸ್ಥಾಪನೆಯನ್ನು ನೆರವೇರಿಸಲಾಗುವುದೆಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಮಾತನಾಡಿ, ಕರ್ನಾಟಕ ಗೃಹ ಮಂಡಳಿ ವತಿಯಿಂದ ಆ.23 ರಂದು ಬೆಳಗ್ಗೆ 11 ಗಂಟೆಗೆ ಅಣಕುನೂರು ಬಳಿಯ ಸರ್ಕಾರಿ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ಕಂದಾಯ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ ಎಂದರು.
ಸಭೆಯಲ್ಲಿ ಕೇಂದ್ರ ಸಚಿವರಾದ ಡಾ.ಎಂ.ವೀರಪ್ಪ ಮೊಯ್ಲಿ, ಕೆ.ಹೆಚ್.ಮುನಿಯಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಡಾ.ಸುಧಾಕರ್, ರಾಜಣ್ಣ, ಕೃಷ್ಣಾರೆಡ್ಡಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಮಾಜಿ ಸಚಿವ ಮುಮ್ತಾಜ್ ಅಲಿಖಾನ್, ಜಿಲ್ಲಾ ಎಸ್ಪಿಎನ್.ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಕ್ಷೀರಭಾಗ್ಯಕ್ಕೆ ಚಾಲನೆ
ಮಾಲೂರು:ಸರ್ಕಾರದ ಯೋಜನೆಗಳನ್ನು ಶಾಲೆಗಳಲ್ಲಿ ಶಿಕ್ಷಕರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೆಡಗಿನಬೆಲೆಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಚ್.ಎನ್. ಕೃಷ್ಣಪ್ಪ ಹೇಳಿದರು.ತಾಲೂಕಿನ ಹೆಡಗಿನಬೆಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯರಾದ ರಾಜಪ್ಪ, ಸೋಮಣ್ಣ, ಕನಕಮ್ಮ, ಮುಖ್ಯೋಪಾಧ್ಯಾಯ ಆರ್.ನರಸಿಂಹ, ಟಿ.ವಿ.ಶ್ರೀನಿವಾಸ್, ಅನಸೂಯಮ್ಮ, ಮುನಿರತ್ನಮ್ಮ ಇದ್ದರು.