'ಸಿಲಿಂಡರ್ ಬಳಕೆ ಅರಿವು ಅವಶ್ಯ'
ಕೆಜಿಎಫ್: ಇಲ್ಲಿನ ಗಣೇಶ್ಪುರಂನ ಅಂಗನವಾಡಿ ಕೇಂದ್ರದಲ್ಲಿ ಸಾಧ್ಯ ಫೌಂಡೇಷನ್ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಗ್ಯಾಸ್ ಬಳಕೆ ಹಾಗೂ ಸುರಕ್ಷತೆ ಬಗ್ಗೆ ತರಬೇತಿ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು.
ಈ ವೇಳೆ ಸಂಯೋಜಕರಾದ ಗಾಯತ್ರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲ ಬಳಕೆ ಸಾಮಾನ್ಯವಾಗಿದ್ದು, ಕಟ್ಟಿಗೆಯಂತಹ ಸಾಂಪ್ರಾದಾಯಿಕ ಉರುವಲು ವಸ್ತುಗಳು
ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನರೂ ಎಲ್ಪಿಜಿ ಸಿಲಿಂಡರ್ಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದರು.
ಆತಂಕದ ಸಂಗತಿ: ಅದೇ ರೀತಿ ದೇಶದಲ್ಲಿ ಒಟ್ಟಾರೆ ಶೇ.65ಕ್ಕೂ ಹೆಚ್ಚು ಕುಟುಂಬಗಳು ಅಡುಗೆ ಅನಿಲವನ್ನು ಅವಲಂಬಿಸಿವೆ. ಆದರೆ ಇನ್ನೊಂದೆಡೆ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 5,500 ಮಂದಿ ಅಡುಗೆ ಅನಿಲ ಸ್ಫೋಟದಿಂದ ಸಾವಿಗೀಡಾಗುತ್ತಿದ್ದು ಇದಕ್ಕೆ ಮುಖ್ಯ ಕಾರಣ ಬಹುತೇಕ ಗ್ಯಾಸ್ ಸಿಲಿಂಡರ್ ಬಳಕೆ ಕುರಿತು ತಿಳುವಳಿಕೆ ಕೊರತೆಯೇ ಕಾರಣವಾಗಿದೆ ಎಂದರು.
ಜಾಗೃತಿ ಕಾರ್ಯಕ್ರಮ: ಗಣೇಶ್ಪುರಂ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಇತರೆ ಬಡಾವಣೆಯ ಸಾರ್ವಜನಿಕರು ಹಾಗೂ ಗೃಹಿಣಿಯರಿಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವುದು ಹೇಗೆ, ಬೆಂಕಿ ಅಪಘಾತಗಳಾಗಲು ಕಾರಣಗಳೇನು, ಗ್ಸಾಸ್ ಎಲ್ಲೆಲ್ಲಿ ಸೋರಿಕೆಯಾಗುವುದು ಎಂದು ಗುರುತಿಸುವುದು, ಸಿಲಿಂಡರ್ ಸ್ಪೋಟ ತಡೆಗಟ್ಟುವುದು ಹೇಗೆ, ಆಕಸ್ಮಿಕವಾಗಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅಪಘಾತವಾಗುವಾಗ ಪ್ರಾಣಪಾಯದಿಂದ ಪಾರಾಗುವುದು, ಸೇರಿದಂತೆ ಗ್ಯಾಸ್ ಸಿಲಿಂಡರ್ನಿಂದಾಗುವ ತೊಂದರೆ ಬಗ್ಗೆ ತರಬೇತಿ, ಜಾಗೃತಿ ಮೂಡಿಸಿದರು.
ನಗರಸಭಾ ಸದಸ್ಯ ನಟರಾಜನ್, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮೀ, ಆರೋಗ್ಯ ಮೇರಿ, ವಿಜಯಲಕ್ಷ್ಮೀ, ಸೇರಿದಂತೆ ಸಾಧ್ಯ ಫೌಂಡೇಷನ್ ಸಂಸ್ಥೆಯ ಮುಖಂಡರಾದ ಮಂಜುನಾಥ್, ರಾಮಕೃಷ್ಣ ಇದ್ದರು.