ನೀರನ್ನು ರಾಷ್ಟ್ರೀಯ ಸ್ವತ್ತಾಗಿ ಘೋಷಿಸಿ
ಕೋಲಾರ: ಐರೋಪ್ಯ ರಾಷ್ಟ್ರಗಳ ಮಾದರಿಯಲ್ಲಿ ನೀರನ್ನು ರಾಷ್ಟ್ರೀಯ ಸ್ವತ್ತಾಗಿ ಘೋಷಿಸಬೇಕು, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರಕಿಸುವ ಮೂಲಭೂತ ಹಕ್ಕಾಗಿ ಘೋಷಿಸಬೇಕು ಹಾಗೂ ಅಂತರ್ಜಲ ಮಸೂದೆಯನ್ನು ಶಾಸನವನ್ನಾಗಿ ಮಾಡಬೇಕು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯು ಜಿಲ್ಲಾಡಳಿತ ಕಚೇರಿಯ ರೆವಿನ್ಯೂ ಹೆಡ್‌ಮುನ್ಷಿ ಕೃಷ್ಣೇಗೌಡ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿತು.
ಮಳೆಗಾಲ ಅನಿಶ್ಚಿತ ಆಗಿರುವಾಗ ನೀರು ಸಂಗ್ರಹಣೆಯೊಂದೇ ನಮ್ಮ ಮುಂದಿರುವ ಮಾರ್ಗವಾಗಿದೆ. ಆದ್ದರಿಂದ ದೊಡ್ಡ ಜಲಾಶಯ ಅಥವಾ ಅಣೆಕಟ್ಟುಗಳ ನಿರ್ಮಾಣ, ಕೆರೆಗಳ ಜೀರ್ಣೋದ್ಧಾರ ಹಾಗೂ ಸಣ್ಣ ಕೆರೆಗಳು, ಹೊಂಡಗಳ ನಿರ್ಮಾಣ, ಭೂಗರ್ಭ ಜಲ ಸಂಪದ್ಭರಿತ ಆಗುವಂತೆ ಹಳ್ಳ ಹಾಗೂ ನದಿಗಳ ಒಡ್ಡುಗಳ ನಿರ್ಮಾಣ, ನದಿಗಳ ಜೋಡಣೆಯನ್ನು ಮಾಡುವಂತೆ ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರದ ನೆರವೂ ಸೇರಿದಂತೆ 2009-10ನೇ ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 1800 ಕೋಟಿ ರು. ಹಣವಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಅತಿ ಬಡವರ ಮನೆಗೂ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡಲು ಇದರಿಂದ ಸಾಧ್ಯವಾಗಿಲ್ಲವೆಂದು ಮನವಿಯಲ್ಲಿ ತಿಳಿಸಲಾಗಿದೆ.
ಇಸ್ರೇಲಿನ ವಿಜ್ಞಾನಿ ಮೈಕೆಲ್ ಇವೆನರಿ ಕೇವಲ 105 ಮಿ.ಮೀ ಮಳೆಯಾಗುವ ನೆಗೇವ್ ಮರುಭೂಮಿಯಲ್ಲಿ ಜಲ ಸಂಗ್ರಹಣೆ ಮಾಡುವ ಹೊಸ ತಂತ್ರಜ್ಞಾನದಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಜೋಧಪುರ ಹಾಗೂ ಜೈಸಲ್ ಮೇರ್‌ಗಳಲ್ಲಿಯೂ ಇಂತಹದ್ದೇ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ತಜ್ಞರ ವರದಿಯ ಪ್ರಕಾರ 1500 ಜನರು ವಾಸಿಸುವ ಒಂದು ಹಳ್ಳಿಗೆ ಕೇವಲ 1.40 ಹೆಕ್ಟೇರ್‌ನಷ್ಟು ಜಾಗ ನೀರಿನ ಸಂಗ್ರಹಣೆಗೆ ಸಾಕಾಗುತ್ತದೆ. ನಮ್ಮಲ್ಲಿ ಇನ್ನೂ ಹೆಚ್ಚಿನ ಸಂಪನ್ಮೂಲ ಇದ್ದರೂ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಇಲ್ಲಿನ ನಾಗರಿಕರು ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವೇದಿಕೆಯ ಮುಖಂಡರು ತಿಳಿಸಿದ್ದಾರೆ. ಮನವಿ ಸಲ್ಲಿಕೆ ಸಂದರ್ಭದಲ್ಲಿ ವಕೀಲರಾದ ಸಾ.ನಾ. ಮೂರ್ತಿ, ವೇದಿಕೆಯ ರಾಜಾಧ್ಯಕ್ಷ ನರೇಂದ್ರ ಬಾಬು, ಎಂ. ಮುರಳಿ, ಟಿ. ಲಕ್ಷ್ಮೀಪತಿ, ವಿ. ಶಂಕರಪ್ಪ, ಎನ್. ಮಹೇಶ್, ಬಿ. ಹೊಸರಾಯಪ್ಪ, ಜಿ.ಶ್ರೀನಿವಾಸ್ ಇದ್ದರು.