ಪಟ್ಟಾಭಿರಾಮನ್ ಬಡಾವಣೆ ಮರೆತಿರೇ?
-ಪಾ.ಶ್ರೀ. ಅನಂತರಾಮ್
ಕೋಲಾರ: ಕರ್ನಾಟಕದ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳಿತ್ತಾದರೂ ಜಾತಿ ಎಂಬ ಅಡ್ಡ ಗೋಡೆಯಿಂದಾಗಿ ಅವಕಾಶ ವಂಚಿತರಾದ ಸ್ವಾತಂತ್ರ್ಯ ಹೋರಾಟಗಾರ, ಮಹಾತ್ಮ ಗಾಂಧೀಜಿ ಅವರ ಆಪ್ತರಲ್ಲಿ ಒಬ್ಬರು ಹಾಗೂ ಪ್ರಾಮಾಣಿಕ ನ್ಯಾಯವಾದಿಯೂ ಆಗಿದ್ದ ಕೆ.ಪಟ್ಟಾಭಿರಾಮನ್ ಈಗ ನಮ್ಮ ನಡುವೆ ಇಲ್ಲದಿದ್ದರೂ ಕೋಲಾರದಲ್ಲಿ ಇವರ ನೆನಪು ಉಳಿಸಲು ಹಿರಿಯರು ಹಳೆ ಬಡಾವಣೆಗೆ ಕೆಪಿ ಹೆಸರನ್ನು ನಾಮಕರಣ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳು ಪಟ್ಟಾಭಿರಾಮನ್ ಅವರ ಆತ್ಮಕ್ಕೆ ಸಂತೋಷ ತರುವ ಯಾವುದೇ ಅಭಿವೃದ್ಧಿ ಕೆಲಸ ಮಾಡದಿರುವುದು ಮಾತ್ರ ವಿಪರ್ಯಸ.
ಪಟ್ಟಾಭಿರಾಮನ್ ಜನಿಸಿದ ಮನೆ ಸಮೀಪ ನಗರಸಭೆಯಿಂದ ಹಾಕಲಾಗಿದ್ದ ಕಲ್ಲಿನ ಫಲಕ ಕೇಬಲ್ ಕಾಮಗಾರಿಗಾಗಿ ತೆರವುಗೊಳಿಸಿ ಮತ್ತೆ ಯಥಾಸ್ಥಿತಿಯಲ್ಲಿ ಫಲಕವನ್ನು ನಿಲ್ಲಿಸುವ ಬದಲು ಕೆಇಬಿ ವಸತಿ ಗೃಹದ ಕಾಂಪೌಂಡಿಗೆ ತಾಕಿಸಿಡಲಾಗಿದೆ.
ನಗರದ ವಿವಿಧೆಡೆ ಯಾವುದೇ ಗುರುತರ ಸಾಧನೆ ಮಾಡದ ವ್ಯಕ್ತಿಗಳ ಸ್ಮಾರಕಗಳನ್ನು ನಿರ್ಮಿಸಿಲಾಗಿದೆ. ಆದರೆ ದೇಶಕ್ಕಾಗಿ ಕೈಲಾದಷ್ಟು ಮಟ್ಟಿಗೆ ದುಡಿದಿರುವ ಹಾಗೂ 1952ರಲ್ಲೇ ವಿಧಾನಸಭೆಗೆ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಪ್ರಜಾಪ್ರಭುತ್ವಕ್ಕೆ ಘನತೆ, ಗೌರವ ತಂದು ಕೊಟ್ಟ ಪಟ್ಟಾಭಿರಾಮನ್ ಹೆಸರು ಚಿರಸ್ಥಾಯಿಯಾಗಿ ಉಳಿಯವಂತಹ ಕೆಲಸ ನಗರಸಭೆ ಮತ್ತು ಸಂಘ ಸಂಸ್ಥೆಗಳಿಂದ ಆಗಬೇಕಾಗಿತ್ತು.
ಪಟ್ಟಾಭಿರಾಮನ್ ಅವರ ಮನೆಯನ್ನು ಸರ್ಕಾರ ಖರೀದಿ ಮಾಡಿ ಆ ಮನೆಯನ್ನು ಸುಂದರವಾದ ಸ್ಮಾರಕ, ಇಲ್ಲವೇ ಸಮುದಾಯ ಭವನವಾಗಿ ಪರಿವರ್ತಿಸಿ ರಚನಾತ್ಮಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಬೇಕಾಗಿತ್ತು.
ಕಡೇ ಪಕ್ಷ ಪಟ್ಟಾಭಿರಾಮನ್ ರಸ್ತೆಯ ಮೊಗಸಾಲೆಯಲ್ಲಿ ನಗರದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗದ ರೀತಿಯಲ್ಲಿ ಪುಟ್ಟದೊಂದು ಪುತ್ಥಳಿ ಸ್ಥಾಪಿಸಿ ಶಾಶ್ವತವಾದ ಗೌರವ ಸಮರ್ಪಣೆ ಮಾಡಲು ನಗರಸಭೆಯು ಚಿಂತನೆ ಮಾಡಿ ಸರ್ಕಾರದಿಂದ ಅಗತ್ಯ ಸಹಕಾರ ಪಡೆಯುವುದಕ್ಕೆ ಅವಕಾಶವಿತ್ತಾದರೂ ಜಾತಿ ಮತ್ತು ಅಸೂಯೆ ತಮ್ಮ ತಲೆಗಳಲ್ಲಿ ತುಂಬಿಕೊಂಡಿರುವ ಜನರು ಈ ವಿಚಾರದಲ್ಲಿ ಹೃದಯವಂತಿಕೆ ಪ್ರದರ್ಶಿಸದಿರುವುದರಿಂದ ಪಟ್ಟಾಭಿರಾಮನ್ ಸ್ವಂತ ಮನೆ ಖಾಸಗಿಯವರ ಪಾಲಾಗಿದೆ. ಕೆಪಿ ಹೆಸರಿನ ಫಲಕವೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಇಷ್ಟೆ ಅಲ್ಲದೆ, ಕೆ.ಪಟ್ಟಾಭಿರಾಮನ್ ಬಡಾವಣೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗಿರುವುದೇ ಹೊರತು ಅಚ್ಚುಕಟ್ಟಾದ ರಸ್ತೆಗಳು, ಬೀದಿ ದೀಪದ ವ್ಯವಸ್ಥೆಗಳಾಗಿಲ್ಲ.
ಈ ಭಾಗದ ಜನಪ್ರತಿನಿಧಿಗಳು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಗಮನ ನೀಡುವ ಬದಲು ಕೆಲವರ ಒತ್ತಡ ಮತ್ತು ಮುಲಾಜಿಗೆ ಒಳಗಾಗಿ ಸಂಧಿ-ಗೊಂಧಿಗಳಿಗೆ ಕಾಂಕ್ರಿಟ್ ಹಾಕಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ.
ಪಟ್ಟಾಭಿರಾಮನ್ ಬಡಾವಣೆಯಲ್ಲಿ ಕೆಪಿಯವರ ಪುತ್ಥಳಿ ನಿರ್ಮಿಸದಿದ್ದರೂ ಸರಿ ಸಣ್ಣ ಮಳೆಗೂ ಹೊಂಡಗಳಾಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು, ಚರಂಡಿಗಳನ್ನು ಸ್ವಚ್ಛಗೊಳಿಸಿ ಜನತೆ ಉತ್ತಮ ಪರಿಸರದಲ್ಲಿ ಜೀವನ ಮಾಡುವಂತೆ ಈ ಭಾಗದ ಜನಪ್ರತಿನಿಧಿಗಳು ಗಮನ ನೀಡುವ ಮೂಲಕ ಮಾದರಿ ಬಡಾವಣೆಯಾಗಿ ಮಾಡುವ ಮೂಲಕ ಕೆಪಿಯವರ ಆತ್ಮಕ್ಕೆ ಚಿರಶಾಂತಿ ಸಿಗುವಂತೆ ಮಾಡಬೇಕೆಂದು ಬಡಾವಣೆಯ ಜನತೆಯ ಒತ್ತಾಸೆಯಾಗಿದೆ.