ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಜ್ಞಾನ ಪ್ರದರ್ಶನದಲ್ಲಿ ಪುಟಾಣಿ ವಿದ್ಯಾರ್ಥಿನಿಯ ಸಾಧನೆ

Srinivasa Murthy VN
Updated On : 5 Aug 2013, 12:45 pm

ಕೋಲಾರ: ಕೆ.ಜಿ.ಎಫ್.ನ ಬೆಮೆಲ್ ನಗರದಲ್ಲಿರುವ  ಬೆಮೆಲ್ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಸಾಯನ್ಸ್ ಇನ್‌ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕೋಲಾರ ನಗರದ ಬೆಂಗಳೂರು ಮಾಂಟೆಸರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಪಾವನಿ ವಿಶೇಷ ಆಕರ್ಷಣೆಯಾಗಿ ಹೊರಹೊಮ್ಮಿದ್ದಾಳೆ.
ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪಾವನಿ ದೈಹಿಕವಾಗಿ ಕುಬ್ಜಳಾದರೂ ಪ್ರತಿಭೆ ಪ್ರದರ್ಶನಕ್ಕೆ ಅದು ಏನೇನೂ ಅಡ್ಡಿಯಲ್ಲ ಎನ್ನುವ ರೀತಿಯಲ್ಲಿ ವಿಜ್ಞಾನ ಪ್ರದರ್ಶನದಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಜಲವಿದ್ಯುತ್ ಯೋಜನೆಯ ಕಾರ್ಯನಿರ್ವಹಣೆ ಬಗ್ಗೆ ವಿಜ್ಞಾನ ಶಿಕ್ಷಕಿ ಮಮತಾ ಕುಂದಾಪುರ ಇವರ ಮಾರ್ಗದರ್ಶನದಲ್ಲಿ ಮಾದರಿಯನ್ನು ಸಿದ್ಧಪಡಿಸಿರುವ ಎ. ಪಾವನಿ, ಬೆಂಚಿನ ಮೇಲೆ ನಿಂತುಕೊಂಡೇ ತೀರ್ಪುಗಾರರ ಪ್ರಶ್ನೆಗಳಿಗೆ  ಅರಳು ಹುರಿದಂತೆ ಪಟಪಟನೆ ಇಂಗ್ಲಿಷ್‌ನಲ್ಲಿ ವಿವರಣೆ ನೀಡುವ ಮೂಲಕ ಗಮನ ಸೆಳೆದಳು.
ಇಡೀ ದೇಶದಲ್ಲಿ ಕೆಜಿಎಫ್ ಚಿನ್ನದ ಗಣಿಗಾಗಿ ಮೊದಲ ಬಾರಿಗೆ ಜಲವಿದ್ಯುತ್ ತಯಾರಿಸಿದ್ದು, ದೇಶದಲ್ಲಿರುವ ಜಲವಿದ್ಯುತ್ ತಯಾರಿಕೆ ಘಟಕಗಳ ಸಂಖ್ಯೆ, ತಯಾರಾಗುವ ಜಲವಿದ್ಯುತ್ ಪ್ರಮಾಣ ಮೊದಲಾದ ವಿವರಗಳನ್ನು ಪಾವನಿ ನೀಡಿದ್ದು ವಿಶೇಷವಾಗಿತ್ತು.ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಡಯಟ್, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ 2012-13ನೇ ಸಾಲಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಇನ್‌ಸ್ಪೈರ್ ಅವಾರ್ಡ್ ಮತ್ತು ವಿಜ್ಞಾನ ವಸ್ತುಪ್ರದರ್ಶನ ಶುಕ್ರವಾರ ಆರಂಭವಾಗಿದ್ದು ಸೋಮವಾರ ಸಮಾರೋಪಗೊಳ್ಳಲಿದೆ.ಜಿಲ್ಲೆಯ ಒಟ್ಟು 939 ಶಾಲೆಗಳಿಂದ ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳು ಮಾದರಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಅವರ ಪೈಕಿ ಶೇ.ಎಂಟರಷ್ಟು ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಕೋಲಾರ ಡಯಟ್‌ನ ಹಿರಿಯ ಉಪನ್ಯಾಸಕ ವೆಂಕಟರಾಮ ರೆಡ್ಡಿ ತಿಳಿಸಿದರು. ಯುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಮತ್ತು ಅವರಲ್ಲಿನ ಪ್ರತಿಭೆಗೆ ನೀರೆರೆಯುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement