ವಿದ್ಯಾರ್ಥಿನಿ ನೇಣಿಗೆ ಶರಣು
ಚಿಂತಾಮಣಿ: ವಿದ್ಯಾರ್ಥಿನಿ ಒಬ್ಬಳು ಜೀವನದಲ್ಲಿ ಬೇಸತ್ತು ನೇಣಿಗೆ ಶರಣಾಗಿರುವ ದಾರುಣ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಣಿಗಾನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಣಿಗಾನಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಅವರ ಮಗಳಾದ ದಿವ್ಯಾ (21) ನೇಣಿಗೆ ಶರಣಾಗಿರುವ ದುದೈವಿ. ಚಿಕ್ಕಬಳ್ಳಾಪುರ ನಗರದ ಬಾಲಗಂಗಾಧರ ಸ್ವಾಮೀಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ದಿವ್ಯಾ ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳೆಂದು ಜೀವನದಲ್ಲಿ ಬೇಸತ್ತು ನೇಣಿಗೆ ಶರಣಾಗಿರಬಹುದೆಂದು ಪೋಷಕರಲ್ಲಿ ಅನುಮಾನ ಉಂಟಾಗಿದೆ.
ಇಂದು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯ
ಕೋಲಾರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2013-14ನೇ ಸಾಲಿನ ಕೋಲಾರ ತಾಲೂಕು ಮಟ್ಟದ ಕ್ರಿಕೆಟ್ ಮತ್ತು ಚೆಸ್ ಪಂದ್ಯಾವಳಿಗಳನ್ನು ತಾಲೂಕಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರಿಗಾಗಿ ಆ.5 ರಂದು ಸೋಮವಾರ ಬೆಳಿಗ್ಗೆ 9.30 ಗಂಟೆಗೆ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾಗವಹಿಸುವ ಶಾಲಾ ಕ್ರಿಕೆಟ್ ಮತ್ತು ಚೆಸ್ ತಂಡಗಳು ಸಂಪೂರ್ಣ ಕಿಟ್‌ನೊಂದಿಗೆ ನೇರವಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಂಜುನಾಥ ಅವರಲ್ಲಿ ವರದಿ ಮಾಡಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9342104603 ಗೆ ಸಂಪರ್ಕಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೆಮ್ಮಶೆಟ್ಟಿಯಲ್ಲಿಕ್ಷೀರ ಭಾಗ್ಯ
ಕೋಲಾರ: ತಾಲೂಕಿನ ಪೆಮ್ಮಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ದಾನಿಗಳಾದ ಪಿ.ಎಂ.ಮುನಿರಾಜು ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾ ಮಕ್ಕಳಿಗೆ ಹಾಲು ಕುಡಿಯಲು ಸ್ಟೀಲ್ ಲೋಟಗಳನ್ನು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬೈರಪ್ಪ, ವಾಟರ್ ಮ್ಯಾನ್ ಮಹೇಶ್, ಸದಸ್ಯರಾದ ನಂಜಪ್ಪ, ಎಂ.ಬಾಬುರಾವ್, ಸಹ ಶಿಕ್ಷಕ ವೆಂಕಟೇಶಪ್ಪ, ಮಧುಚಂದ್ರ ಇದ್ದರು.
ಇಂದು ವಿಶೇಷತರಬೇತಿ ಶಿಬಿರ
ಕೋಲಾರ: ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಕೋಲಾರ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಸಂವಿಧಾನದ 97 ನೇ ತಿದ್ದುಪಡಿ ಹಾಗೂ ಸಹಕಾರ ಸಂಘಗಳ ಚುನಾವಣಾ ವಿಷಯ ಕುರಿತು ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಆ.5 ರಂದು ಸೋಮವಾರ ಬೆಳಗ್ಗೆ 10.30 ಗಂಟೆಗೆ ನಗರದ ಕೊಲಾರ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಮದ್ದೇರಿ ಎಸ್.ರಾಮೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಎನ್.ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಉರಿಗಿಲಿ ಎಸ್.ರುದ್ರಸ್ವಾಮಿ, ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮುನಿನಾರಾಯಣಪ್ಪ, ಕೆ.ವಿ.ದಯಾನಂದ್, ಶೇಕ್ ಮಹಮದ್, ಕೋಚಿಮುಲ್ ನಿರ್ದೇಶಕಿ ಗಂಗಮ್ಮ, ಎನ್.ಸೋಮಶೇಖರ್, ಬಿ.ಎಂ.ಶಂಕರೇಗೌಡ, ಎಂ.ಶಿವಣ್ಣ, ಎನ್.ಹನುಮೇಶ್, ಎನ್.ಕೃಷ್ಣಾರೆಡ್ಡಿ,ಶ್ರೀನಿವಾಸಗೌಡ, ವಿ.ಎಂ.ವೆಂಕಟೇಶಪ್ಪ ಭಾಗಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೋಬಳಿಗಳಲ್ಲಿ ಕಸಾಪ ಘಟಕ ರಚನೆ: ನಾಗರಾಜ್
ಮುಳಬಾಗಲು: ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳ ಹೋಬಳಿ ಕೇಂದ್ರಗಳಲ್ಲಿ ಹೋಬಳಿಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ರಚಿಸುವ ಮೂಲಕ ಕನ್ನಡ ಪರವಾದ ಚಟುವಟೆಕೆಗಳನ್ನು ವಿಸ್ತರಿಸಲಾಗುವುದೆಂದು ಕೋಲಾರ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು. ಪಟ್ಟಣದ ಡಿವಿಜಿ ಶಾಲೆಯಲ್ಲಿ ತಾಲೂಕು ಕಸಾಪ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಕಾರ್ಯಕ್ರಮಗಳನ್ನು ಉದ್ಪಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೊದಲು ಮುಳಬಾಗಲು ತಾಲೂಕಿನಲ್ಲಿ ಹೋಬಳಿಮಟ್ಚದ ಸಾಹಿತ್ಯ ಪರಿಷತ್ ಶಾಖೆಗಳನ್ನು ಪ್ರಾರಂಭಿಸಿ ಮುಂದೆ ಬೇರೆ ತಾಲೂಕುಗಳಿಗೆ ಗಮನ ನೀಡಲಾಗುವುದು. ಡಿವಿಜಿ ಜನ್ಮ ದಿನಾಚರಣಿಯನ್ನು ಎಲ್ಲಾ ತಾಲೂಕುಗಳಲ್ಲೂ ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಸಾಹಿತ್ಯದ ಕಂಪು ಪಸರಿಸುವುದಾಗಿ ನುಡಿದರು. ತಾಲೂಕು ನೂತನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮು.ಕೃ. ಪದ್ಮನಾಭ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ಪಸರಿಸುವ ಹಾಗೂ ಭಾಷೆ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು. ತಾಲೂಕಿನ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳಿಗೆ ಪೂರಕ ಕಾರ್ಯಕ್ರಮಗಳನ್ನು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗುವುದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಕನ್ನಡ ಕಾರ್ಯಕ್ರಮ, ಹೋಬಳಿ ಮಟ್ಟದಲ್ಲಿ ಸಾಹಿತ್ಯ, ಸಮ್ಮೇಳನ ಏರ್ಪಡಿಸಲಾಗುವುದು ಎಂದರು. ಡಿವಿಜಿ ಬಗ್ಗೆ ಕಾಶಿಸ್ವಾಮಿ, ಬಿ.ಎನ್. ಸರಸ್ಪತಿ, ವಿ.ಆರ್. ಪ್ರಭಾಕರ ಗುಪ್ತ, ಜಯರಾಮರೆಡ್ಡಿ, ಉಪನ್ಯಾಸ ನೀಡಿದರು. ಟಿ.ನಂದಿನಿ, ತೇಜಸ್ವಿನಿ, ಮನೀಷ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಂಜಾನ್ ಹಬ್ಬ ಶಾಂತಿಯುತ ಆಚರಣೆಗೆ ನಿರ್ಧಾರ
ಚಿಂತಾಮಣಿ: ರಂಜಾನ್ ಹಬ್ಬವನ್ನು ಮುಸ್ಲಿಂ ಸಹೋದರರು ಶಾಂತಿಯಿಂದ ಆಚರಿಸಲು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ ಮುಖಂಡರು ತಮ್ಮ ತಮ್ಮ ಅಭಿಪ್ರಯಾಯವನ್ನು ವ್ಯಕ್ತಪಡಿಸಿದರು. ತಾಲೂಕಿನ ಗಡಿಭಾಗದ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಶಾಂತಿ ಸಭೆಯಲ್ಲಿ ಹಿಂದೂ - ಮುಸ್ಲಿಂ ಸಹೋದರರು ರಂಜಾನ್ ಹಬ್ಬವನ್ನು ಶಾಂತಿ ಪ್ರೇಮದಿಂದ ಆಚರಿಸಲು ಹಾಗೂ ಶಾಂತಿಯನ್ನು ಕಾಪಾಡಲು ತಿಳಿಸಿದರು. ಈ ಸಂದರ್ಭದಲ್ಲಿ ಬಟ್ಲಹಳ್ಳಿ ಠಾಣೆಯ ಸಬ್ ಇನ್ಸೆಪೆಕ್ಟರ್ ಪ್ರವೀಣ್ ಕುಮಾರ್, ಮುಖಂಡರಾದ ವೀರ ಷರೀಪ್, ಸುಮಂತ್, ಬಾಬಾ ಹುಸೇನ್, ರಮೇಶ್ ರೆಡ್ಡಿ, ಚಾಂದ್ ಪಾಷ, ಜೆ.ಪಿ.ಪ್ರಸಾದ್, ಕೃಷ್ಣಾರೆಡ್ಡಿ, ಮಂಜುನಾಥ್ ಸೇರಿದಂತೆ ಇನ್ನೂ ನೂರಾರು ಹಿಂದೂ - ಮುಸ್ಲಿಂ ಸಹೋದರರು ಶಾಂತಿ ಸಭೆಯಲ್ಲಿ ಭಾಗವಹಿಸಿದರು.
ಒತ್ತುವರಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ಮಾಲೂರು: ಕೆರೆ-ಕಾಲುವೆಗಳ ಒತ್ತುವರಿಗೆ ಸಹಕಾರ ನೀಡುವ ಜಲಾನಯನ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದು, ಯಾವುದೇ ಮುಲಾಜಿಗೂ ಒಳಗಾಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಎಚ್ಚರದಿಂದ ಇರಬೇಕು ಎಂದು ಶಾಸಕ ಮಂಜುನಾಥ್ ಗೌಡ ರವರು ಹೇಳಿದರು. ತಾಲೂಕಿನ ಅಲಂಬಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೆರೆ-ಕಾಲುವೆ ಸೇರಿದಂತೆ ಸ್ಮಶಾನಗಳನ್ನು ಒತ್ತುವರಿ ಮಾಡಿಕೊಳ್ಳುವ ಕಾಯಕ ಹೆಚ್ಚಾಗಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳ ಸಹಕಾರಗಳು ಇರುವುದಲ್ಲಿ ಸಂಶಯವಿಲ್ಲ. ಈ ಹಿಂದೆ ಆಗಿರುವ ಸರ್ಕಾರಿ ಜಮೀನಿನ ಎಲ್ಲ ರೀತಿಯ ಒತ್ತುವರಿ ಸಮಸ್ಯೆಗಳನ್ನು ಮುಲಾಜಿಲ್ಲದೆ ತೆರವು ಮಾಡಲಾಗುವುದು. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಸಭೆಗೆ 2000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ನೀಡುವ ಪ್ರಯತ್ನ ನಡೆಸಿದರು. ಇದೇ ಸಂದರ್ಭ ಇತ್ತೀಚೆಗೆ ಆನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದ 3 ಕುಟುಂಬಗಳಿಗೆ ತಲಾ 4 ಲಕ್ಷ ಚೆಕ್ ಅನ್ನು ಶಾಸಕರು ವಿತರಿಸಿದರು.