ಶಂಕರ್ಗೆ ಟಿಕೆಟ್ಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 4
ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಎಸ್. ಶಂಕರ್ ಅವರಿಗೆ ಟಿಕೆಟ್ ನೀಡಲು ಆಗ್ರಹಿಸಿ ಮಾದಿಗ ದಂಡೋರ ಹಾಗೂ ಎಸ್. ಶಂಕರ್ ಅಭಿಮಾನಿ ಬಳಗದವರು ಭಾನುವಾರ ಪ್ರತಿಭಟಿಸಿದರು.
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಎದುರು ನೂರಾರು ಮಂದಿ ಎಸ್. ಶಂಕರ್ಗೆ ಟಿಕೆಟ್ ನೀಡಲು ಒತ್ತಾಯಿಸಿ ಪ್ರತಿಭಟಿಸಿದರು. ಆರ್. ಧರ್ಮಸೇನ ಅವರಿಗೆ ಟಿಕೆಟ್ ನೀಡಿದರೆ ಮತ ಹಾಕುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಸೇನ ಅವರನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿದೆ. ಅಭ್ಯರ್ಥಿ ಬದಲಾವಣೆ ಸಾಧ್ಯವಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಶಂಕರ್ ಸ್ಪರ್ಧಿಸುವುದು ಬೇಡ. ಧರ್ಮಸೇನ ಮತ್ತು ಶಂಕರ್ ಒಂದೇ ಕೋಮಿನವರು. ಹೀಗಾಗಿ ಧರ್ಮಸೇನ ಅವರನ್ನೇ ಬೆಂಬಲಿಸುವಂತೆ ಹೇಳಿದರು.
ಮನವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಎದುರು ನೂರಾರು ಮಂದಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ನೆರೆದಿದ್ದರು. ತಮ್ಮ ಕಷ್ಟ ಪರಿಹರಿಸುವಂತೆ ಹಲವರು ಮನವಿ ಸಲ್ಲಿಸಿದರು.
ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಸಿದ್ದರಾಮಯ್ಯ, ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ಜೊತೆಗೆ ರಾಕೇಶ್ ಸಿದ್ದರಾಮಯ್ಯ ಇದ್ದರು. ಬಳಿಕ ಬೆಳಗ್ಗೆ 10.30ಕ್ಕೆ ಸಿದ್ದರಾಮಯ್ಯ ಅವರು ಮೈಸೂರಿನಿಂದ ಬೆಂಗಳೂರಿಗೆ ರಸ್ತೆ ಮೂಲಕ ತೆರಳಿದರು.
ಅಂಗವಿಕಲರ ಶೌಚಾಲಯ ಅನ್ಯರ ಪಾಲು
ಕ.ಪ್ರ.ವಾರ್ತೆ ಮೈಸೂರು ಆ. 4
ಯಾರಿಗಾದರೂ ಅನ್ಯಾಯವಾದರೆ ನ್ಯಾಯ ಕೋರಲು ನ್ಯಾಯಾಲಯ ಮೊರೆ ಹೋಗಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆದರೆ, ನ್ಯಾಯಾಲಯದಲ್ಲೆ ಅನ್ಯಾಯವಾದರೆ ಮತ್ತೆಲ್ಲಿಗೆ ಹೋಗುವುದು?
ಹೌದು, ಇಂತಹ ಒಂದು ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡುವುದು ಸಹಜ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಅಂಗವಿಕಲರು ತಮ್ಮ ವ್ಯಾಜ್ಯ ಪರಿಹರಿಸಿಕೊಳ್ಳಲು ನ್ಯಾಯಾಲಯಕ್ಕೆ ಆಗಮಿಸಿದಾಗ ಅವರ ಅನುಕೂಲಕ್ಕಾಗಿ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಅಂಗವಿಕಲರ ಸುಲಭ ಓಡಾಟಕ್ಕಾಗಿಯೇ ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಶೌಚಾಲಯ ಮಾತ್ರ ಈವರೆಗೂ ಅಂಗವಿಕಲರಿಗೆ ಲಭ್ಯವಾಗಿಲ್ಲ. ಬದಲಾಗಿ ಕೋರ್ಟ್ ಸಿಬ್ಬಂದಿಗೆ (ಸಿಬ್ಬಂದಿಯಲ್ಲೂ ಕೆಲವರಿಗೆ) ಉಪಯೋಗವಾಗುತ್ತಿರುವುದು ತಾರತಮ್ಯ ಉಂಟು ಮಾಡಿದೆ. ನ್ಯಾಯಾಲಯದ ಸಿಬ್ಬಂದಿಯಲ್ಲಿ ಕೆಲವು ಮಂದಿ ಶೌಚಾಲಯದ ಬೀಗದ ಕೀ ಮಾದರಿಯನ್ನು ನಕಲು ಮಾಡಿಸಿಟ್ಟುಕೊಂಡು ಅಗತ್ಯವಿದ್ದಾಗ ಶೌಚಾಲಯ ಬಳಸುತ್ತಿದ್ದಾರೆ. ಅಂಗವಿಕಲರು ಮಾತ್ರ ಇತ್ತ ಶೌಚಾಲಯ ಬಳಸದೆ, ಅತ್ತ ಮಾಮೂಲಿ ಶೌಚಾಲಯ ಬಳಸದೆ ತ್ರಾಸಪಡುವಂತಾಗಿದೆ. ಈ ಸಮಸ್ಯೆ ಎರಡು ವರ್ಷಗಳಿಂದ ಇದ್ದರೂ ಯಾರೂ ಅಂಗವಿಕಲರ ಪರ ವಕಾಲತ್ತು ವಹಿಸಿಲ್ಲ. ಮಾಮೂಲಿ ಶೌಚಾಲಯ ಬಳಸಲು ಅಂಗವಿಕಲರಿಗೆ ಕಷ್ಟವಾಗುತ್ತದೆ. ಅವರು ಸುಲಭವಾಗಿ ಓಡಾಡಲು ರ್ಯಾಂಪ್ ನಿರ್ಮಿಸಿರುವುದಿಲ್ಲ. ಅಂಗವಿಕಲರಿಗಾಗಿಯೇ ನಿರ್ಮಿಸಿರುವ ಶೌಚಾಲಯವನ್ನು ಸಿಬ್ಬಂದಿಯಿಂದ ವಿಮುಕ್ತಿಗೊಳಿಸಿ ಉಪಯೋಗಕ್ಕೆ ಅನುವು ಮಾಡಿಕೊಡುವಂತೆ ಹಲವು ಮಂದಿ ಒತ್ತಾಯಿಸಿದ್ದಾರೆ.