ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸತ್ಕಾರ್ಯಕ್ಕೆ ಸ್ಪಂದನೆಯೇ ನಿಜವಾದ ಸಮಾಜ ಸೇವೆ'

Srinivasa Murthy VN
Updated On : 5 Aug 2013, 12:45 pm

ಚಿಕ್ಕಬಳ್ಳಾಪುರ: ಖರ್ಚು ಮಾಡುವುದು ಸುಲಭ, ಉಳಿಸುವುದು ಕಷ್ಟ. ಉಳಿಸಿದುದನ್ನು ಬೆಳೆಸಿ ಸತ್ಕಾರ್ಯಗಳಿಗೆ ವಿನಿಯೋಗ ಮಾಡಿದರೆ ಅದು ನಿಜವಾದ ಸಮಾಜಸೇವೆಯಾಗುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಎನ್.ವಿ. ಸುಬ್ರಮಣ್ಯಂ ತಿಳಿಸಿದರು.
ನಗರದ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಘಟಕರು ಹಾರ ತುರಾಯಿಗಳಿಗೆ ಸನ್ಮಾನ ಸಮಾರಂಭಗಳಿಗೆ ಅನಗತ್ಯ ಹಣವನ್ನು ಖರ್ಚು ಮಾಡದೇ ಅದೇ ಹಣವನ್ನು ಸಮಾಜ ಸೇವೆಗೆ ಬಳಕೆ ಮಾಡಿದರೆ ಅದಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಬೆಂಗಳೂರಿನ ಪದ್ಮನಾಭನಗರದಲ್ಲಿ ಮೂರು ಅಂತಸ್ತುಗಳ ಮಹಿಳಾ ವಸತಿ ಗೃಹ ನಿರ್ಮಾಣ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಹಿಳಾ ವಸತಿ ಗೃಹ ಮುಂದಿನ ಸಾಲಿನ ಶೈಕ್ಷಣಿಕ ವರ್ಷದ ಆರಂಭದ ಒಳಗೆ ಉದ್ಘಾಟನೆ ಆಗಲಿದೆ. 168 ಬಡ ವಿದ್ಯಾರ್ಥಿನಿಯರಿಗೆ ಹಾಗೂ 25 ಮಂದಿ ಉದ್ಯೋಗಸ್ಥ ಮಹಿಳೆಯರಿಗೆ ಉಚಿತವಾಗಿ ಮಹಿಳಾ ವಸತಿ ಗೃಹ ಆಶ್ರಯತಾಣವಾಗುತ್ತದೆ ಎಂದರು.
ನೆರವು ನೀಡಿ: ಸುಮಾರು ಮೂರುವರೆ ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ವಿಪ್ರ ಬಂಧುಗಳು ತೆರೆದ ಮನಸ್ಸಿನಿಂದ ನೆರವು ನೀಡಬೇಕು ಎಂದರು. ರಾಜ್ಯದಲ್ಲಿ ಬ್ರಾಹ್ಮಣ ಸಂಘಟನೆ ಹೆಚ್ಚಿಸುವ ವಿಪ್ರ ಸಂಪರ್ಕ ಅಭಿಯಾನ ನಡೆಯುತ್ತಿದೆ.ರಾಜ್ಯದ ಎಲ್ಲಾ ಜಿಲ್ಲಾ ಶಾಖೆಗಳ ಪದಾಧಿಕಾರಿಗಳು ಈ ಅಭಿಯಾನವನ್ನು ಸದಸ್ಯತ್ವ ನೋಂದಣೆ ಮಾಡಿಸುವ ಮೂಲಕ ಅಭಿಯಾನವನ್ನು ಬಲಪಡಿಸಬೇಕು ಎಂದು ಕರೆನೀಡಿದರು.
ಇದೇ ಸಂದರ್ಭದಲ್ಲಿ ಗುಡಿಬಂಡೆ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ತಲಾ 50 ಸಾವಿರ ರು.ಚಿಕ್ಕಬಳ್ಳಾಪುರ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ 25 ಸಾವಿರ ರು.ಗಳ ದೇಣಿಗೆಯನ್ನು ಮುಂದಿನ ಕೆಲವೇ ದಿನಗಳಲ್ಲಿ ನೀಡುವುದಾಗಿ ಪದಾಧಿಕಾರಿಗಳು ಘೋಷಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮುಖಂಡರುಗಳನ್ನು ಜಿಲ್ಲಾ ಮತ್ತು ತಾಲೂಕು ಘಟಕದ ಮುಖಂಡರುಗಳನ್ನು ಕಾರ್ಯಕ್ರಮದ ಆಯೋಜಕರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಹೆಸರಾಂತ ಚಲನಚಿತ್ರ ರಂಗದ ಹಿರಿಯ ನಟ ಹಾಗೂ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಮಾಜಿ ಶಾಸಕ ತಿಮ್ಮಪ್ಪ ಹೆಗಡೆ, ಜಿಲ್ಲಾ ಮಹಾಸಭಾದ ಅಧ್ಯಕ್ಷ ವಾಸುದೇವರಾವ್, ತಾಲೂಕು ಮಹಾಸಭಾದ ಅಧ್ಯಕ್ಷ ಹೆಚ್.ಎಸ್.ಶೇಷಭಟ್ಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement