ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿವ ನೀರು, ಶೌಚಾಲಯ ಒದಗಿಸಿ

Srinivasa Murthy VN
Updated On : 22 Aug 2013, 11:49 am

ಕ.ಪ್ರ.ವಾರ್ತೆ ಕೋಲಾರ ಆ.22
ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಸುಮಾರು 1800 ವಿದ್ಯಾರ್ಥಿಗಳು, 54 ಮಂದಿ ಬೋಧಕರು ಹಾಗೂ 25ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿ ಇದ್ದು ಶುದ್ಧವಾದ ಕುಡಿಯುವ ನೀರು, ಶೌಚಾಲಯಗಳ ಕೊರತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಕೊರತೆ ಇರುವುದರಿಂದ ಕೂಡಲೇ ಸಮಸ್ಯೆ ನಿವಾರಣೆ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕಾಲೇಜಿನ ಅವರಣದಲ್ಲಿ ಪ್ರತಿ ಗುರುವಾರ ನಡೆಯುವ ವಿದ್ಯಾರ್ಥಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಮತ್ತು ಮಹಿಳಾ ಸಿಬ್ಬಂದಿಗೆ ಕುಡಿಯಲು ಶುದ್ಧವಾದ ನೀರು ಸಿಗುತ್ತಿಲ್ಲ. ಶೌಚಾಲಯಗಳ ಕೊರತೆಯಿಂದ ಸಮಸ್ಯೆಯಾಗುತ್ತಿದೆ ಎಂದು ದೂರಿದರು. ಕಾಲೇಜು ವೇಳೆ ಬದಲಾಯಿಸಿಬೇಕು, ಮಹಿಳಾ ಉಪನ್ಯಾಸಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಾಣ, ಕ್ರೀಡಾ ಸಾಮಗ್ರಿಗಳ ವಿತರಣೆಗೆ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲ ವೆಂಕಟೇಶ್, ಕುಡಿಯುವ ನೀರಿನ ಸಮಸ್ಯೆ ಇನ್ನೆರಡು ಮೂರು ದಿನಗಳಲ್ಲಿ ನಿವಾರಣೆ ಆಗುತ್ತದೆ. ನೀರಿನ ಟ್ಯಾಂಕಿನ ಸ್ವಚ್ಛತೆ ಕಾರ್ಯ ನಡೆಸಲಾಗುತ್ತಿದೆ. ಶುದ್ಧ ನೀರಿನ ಘಟಕವನ್ನು ಸ್ಥಾಪಿಸಿ ಒಳ್ಳೆಯ ನೀರು ಕುಡಿಯಲು ಒದಗಿಸುತ್ತೇವೆ. ಕಾಲೇಜು ವೇಳಾಪಟ್ಟಿ ಬದಲಿಸಲು ಸಾಧ್ಯವಿಲ್ಲ. ಕಾಲೇಜು ಶಿಕ್ಷಣ ಇಲಾಖೆಯಿಂದಲೇ ಸ್ಪಷ್ಟ ಸೂಚನೆ ಇರುವುದರಿಂದ ಇಲಾಖೆಯ ಮುಖ್ಯಸ್ಥರ ಆದೇಶದಂತೆ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಕೋರಿದರು.
10 ಲಕ್ಷ ಬಿಡುಗಡೆ: ಶೌಚಾಲಯಗಳ ನಿರ್ಮಾಣಕ್ಕೆ ಇಲಾಖೆಯಿಂದ 10 ಲಕ್ಷ ಬಿಡುಗಡೆಯಾಗಿದೆ. ಈ ಅನುದಾನ ಲೋಕೋಪಯೋಗಿ ಇಲಾಖೆಗೆ ಹೋಗಿದೆ. ಈಗಾಗಲೇ ನಾವು ಕಾಲೇಜಿನ ಕಡೆಯಿಂದ ಶೀಘ್ರ ಕಾಮಗಾರಿಗೆ ಪತ್ರ ಬರೆದಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಿದರೆ ಸಮಸ್ಯೆ ನಿವಾರಣೆ ಆಗುತ್ತದೆ ಎಂದರು.
ಶೌಚಾಲಯಕ್ಕೆ 10 ಲಕ್ಷ ಅನುದಾನ ಬಂದು ಆರು ತಿಂಗಳಾಗಿದೆ. ಲೋಕೋಪಯೋಗಿ ಇಲಾಖೆಯವರು ಬೇಕಾಗಿಯೇ ಕಾಮಗಾರಿ ವಿಳಂಬ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ತಾವು ಅನುಮತಿ ನೀಡಿದಲ್ಲಿ ನಾಳೆಯೇ ಪ್ರತಿಭಟನೆ ಮಾಡುತ್ತೇವೆಂದು ವಿದ್ಯಾರ್ಥಿಗಳು ತಿಳಿಸಿದಾಗ, ಪ್ರತಿಭಟನೆಗೆ ಬದಲು ವಿದ್ಯಾರ್ಥಿಗಳ ನಿಯೋಗ ತೆರಳಿ ಮನವಿ ಮಾಡುವುದರಿಂದ ಕೆಲಸ ಬೇಗನೆ ಆಗಬಹುದೆಂದು ಪ್ರಾಂಶುಪಾಲರು ಸಲಹೆ ನೀಡಿದರು. ವಿದ್ಯಾರ್ಥಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್, ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು ಮತ್ತು ಶಿಸ್ತು ಇದ್ದಲ್ಲಿ ಕಾಲೇಜಿನ ಪ್ರಗತಿ ತಾನಾಗಿಯೇ ಹೆಚ್ಚುತ್ತದೆ ಎಂದರು.
ಹೆಚ್ಚುತ್ತಿರುವ ಟೀಕೆ: ಇತ್ತೀಚಿನ ದಿನಗಳಲ್ಲಿ ಕಾಲೇಜಿನ ವ್ಯವಸ್ಥೆ ಬಗ್ಗೆ ಟೀಕೆಗಳು ಹೆಚ್ಚಾಗುತ್ತಿವೆ. ಲೋಕಾಯುಕ್ತರು ಭೇಟಿ ನೀಡಿದ ನಂತರ ಕಂಡುಬಂದ ವಿದ್ಯಮಾನಗಳಿಂದ ಕಾಲೇಜಿಗೆ ಕೆಟ್ಟ ಹೆಸರು ಬರುವಂತಾಗಿದೆ. ವಿದ್ಯಾರ್ಥಿಗಳು ಕಾಲೇಜನ್ನು ಉಳಿಸಿ, ತಾವು ಬೆಳೆಯುವಂತಾಗಲು ಪ್ರತಿದಿನ ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಿ, ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ನಿವಾರಣೆ ಮಾಡಿಕೊಳ್ಳಬೇಕೆಂದರು.
ಮನ್ವಂತರ ಪ್ರಕಾಶನದ ಅಧ್ಯಕ್ಷ ಅನಂತರಾಮ್ ಮಾತನಾಡಿ, ಕಾಲೇಜಿಗೆ ಉತ್ತಮ ಇತಿಹಾಸವಿದೆ. ಯಾರೋ ಮಾಡುವ ತಪ್ಪಿನಿಂದ ಕಾಲೇಜಿಗೆ ಕಳಂಕ ಬರುವುದು ಬೇಡ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಉತ್ತಮ ನಡವಳಿಕೆ ಅಳವಡಿಸಿಕೊಂಡು ಅಬ್ದುಲ್ ಕಲಾಂ ರೀತಿಯಲ್ಲಿ ಖ್ಯಾತಿ ಗಳಿಸಿ, ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ, ನ್ಯಾಯಸಮ್ಮತವಾಗಿ ಕಾಲೇಜಿನ ಎಲ್ಲ ಸಿಬ್ಬಂದಿಯೊಂದಿಗೆ ಚರ್ಚಿಸಿ ನಿವಾರಣೆ ಮಾಡಿಕೊಳ್ಳುವಂತೆ ತಿಳಿಸಿದರು. ವಿದ್ಯಾರ್ಥಿ ಮುಖಂಡ ಹೂವಳ್ಳಿ ನಾಗರಾಜು, ಕಾಲೇಜಿನ ಸಮಸ್ಯೆಗಳನ್ನು ಬೇರೆ ಯಾರೋ ಬಂದು ನಿವಾರಣೆ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡುವ ಬದಲು ತಮ್ಮ ನಾಯಕತ್ವದಲ್ಲೇ ಪರಿಹಾರ ಕಂಡುಕೊಳ್ಳುವಂತೆ ಹೇಳಿದರು.
ವಿದ್ಯಾರ್ಥಿ ಸಮಾವೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎನ್‌ಸಿಸಿ ಅಧಿಕಾರಿ ಲಾರೆನ್ಸ್ ಪ್ರಸನ್ನ, ಎನ್.ಎಸ್.ಎಸ್ ಘಟಕದ ಅಧಿಕಾರಿ ರಾಮಕೃಷ್ಣಪ್ಪ, ದೈಹಿಕ ಶಿಕ್ಷಣಾಧಿಕಾರಿ ಶಶಿಧರ್, ಉಪನ್ಯಾಸಕಿಯರಾದ ಕವಿತಾ, ಮಂಜುಳ ಸೇರಿದಂತೆ ಎಲ್ಲಾ ಉಪನ್ಯಾಸಕರು ಭಾಗವಹಿಸಿ ಕಾಲೇಜಿನ ಪ್ರಗತಿಗೆ ಸಂಕಲ್ಪತೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement