ಖಾತೆಗಾಗಿ 10 ಸಾವಿರ ಲಂಚ; ಲೋಕಾಯುಕ್ತರ ಬಲೆಗೆ ವಿಎ
ಕೋಲಾರ: ಜಮೀನಿನ ಖಾತೆ ಮಾಡಿಕೊಡಲು ಗ್ರಾಮಸ್ಥರೊಬ್ಬರಿಂದ 10 ಸಾವಿರ ರು. ಲಂಚ ಪಡೆದ ಗ್ರಾಮ ಲೆಕ್ಕಿಗ ಲೋಕಾಯುಕ್ತರ ಬಲೆಗೆ ಸಿಕ್ಕಿ ಜೈಲು ಸೇರಿದ್ದಾರೆ.
ಕೋಲಾರ ತಾಲೂಕಿನ ಕೆಂಬೋಡಿ ಗ್ರಾಮ ವ್ಯಾಪ್ತಿಯ ಗ್ರಾಮ ಲೆಕ್ಕಿಗ ಯೋಗೇಂದ್ರ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಆರೋಪಿಯಾಗಿದ್ದಾರೆ.
ಪ್ರಕರಣ ಏನು?: ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ಮಂಜುನಾಥ್ ಉರುಫ್ ಕಂದಪ್ಪ ಎಂಬುವರ ಪತ್ನಿಗೆ ಸೇರಿದ 1.5 ಎಕರೆ ಜಮೀನು ತಾಲೂಕಿನ ಕೆಂಬೋಡಿ ಗ್ರಾಮದ ಸರ್ವೆ ನಂ.188ರಲ್ಲಿ ಇದೆ. ಸದರಿ ಜಮೀನಿನ ಖಾತೆಗಾಗಿ ಅರ್ಜಿ ಸಲ್ಲಿಸಲಾಗಿತ್ತು.
ಕೋಲಾರದ ಕೋಟೆ ಬಡಾವಣೆಯಲ್ಲಿ ಖಾಸಗಿ ಕಚೇರಿ ಮಾಡಿಕೊಂಡಿರುವ ಗ್ರಾಮ ಲೆಕ್ಕಿಗ ಯೋಗೇಂದ್ರ, ಖಾತೆ ಮಾಡಿಕೊಡಲು 10 ಸಾವಿರ ರು. ನೀಡಬೇಕೆಂದು ಅರ್ಜಿದಾರ ಮಂಜುನಾಥ್ ಸ್ನೇಹಿತ ನಡುಮಾಕನಹಳ್ಳಿಯ ಸೂರ್ಯ ಪ್ರಕಾಶ್ ಎಂಬವರ ಬಳಿ ತಿಳಿಸಿದ್ದರು.
ಗ್ರಾಮ ಲೆಕ್ಕಿಗನ ವಿರುದ್ಧ ಈ ಸಂಬಂಧ ಸೂರ್ಯಪ್ರಕಾಶ್ ಗುರುವಾರ ದೂರು ನೀಡಿದ್ದರು. ಇದರ ಅನ್ವಯ ಲೋಕಾಯುಕ್ತ ಡಿವೈಎಸ್ಪಿ ಎಂ.ಎ.ನಾಗರಾಜ್, ಇನ್ಸ್ಪೆಕ್ಟರ್ಗಳಾದ ಲೋಕೇಶ್, ಅಶ್ವತ್ಥನಾರಾಯಣ್, ಸಿಬ್ಬಂದಿ ರಾಮಚಂದ್ರ, ಪ್ರಸಾದ್, ನರಸಿಂಹಯ್ಯ, ನಿರ್ಮಲ ಮುಂತಾದವರು ಗ್ರಾಮ ಲೆಕ್ಕಿಗ ಯೋಗೇಂದ್ರ ಅವರನ್ನು ಬೆಲೆಗೆ ಹಾಕಿಕೊಳ್ಳಲು ಯೋಜನೆ ಸಿದ್ಧಪಡಿಸಿ ಗುರುವಾರ ಸಂಜೆ ಕೋಲಾರದ ಕೋಟಿ ಬಡಾವಣೆಯಲ್ಲಿರುವ ಯೋಗೇಂದ್ರ ಖಾಸಗಿ ಕಚೇರಿ ಬಳಿ ಕಾದು ಕುಳಿತಿದ್ದರು. ಅರ್ಜಿದಾರ ಮಂಜುನಾಥ್ ಪರವಾಗಿ ಕಚೇರಿಗೆ ಬಂದ ಸೂರ್ಯ ಪ್ರಕಾಶ್, ಖಾತೆ ಮಾಡಿಕೊಡಲು ತಾವು ಹೇಳಿದ ರೀತಿಯಲ್ಲಿ ಹಣ ತಂದಿದ್ದೇನೆಂದು 10 ಸಾವಿರ ರು. ನೀಡುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ಯೋಗೇಂದ್ರ ಅವರನ್ನು ಹಣದ ಸಮೇತ ಬಂಧಿಸಿದ್ದಾರೆ.
ಈ ಸಂದರ್ಭದಲ್ಲಿ ಮುದುವಾಡಿಯ ವಿಎ ಅರುಣ್ ಎಂಬುವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂಬ ಆರೋಪದಡಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಪಾರಸು ಮಾಡಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲಂಚ ಪಡೆದ ಆರೋಪದಡಿ ಬಂಧಿತರಾಗಿರುವ ವಿಎ ಯೋಗೇಂದ್ರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.