ನಗರಸಭೆ ಆಯುಕ್ತ ಮಹೇಂದ್ರ ಕುಮಾರ್ ಅಮಾನತು
ಕ.ಪ್ರ.ವಾರ್ತೆ ಕೋಲಾರ ಆ.22
ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಕೋಲಾರ ನಗರಸಭೆ ಆಯುಕ್ತ ಮಹೇಂದ್ರ ಕುಮಾರ್ ಜಿಲ್ಲೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಶೇ. 22.75ರ ಅನುದಾನದಲ್ಲಿ 10 ಲಕ್ಷ ರು. ದೇಣಿಗೆಯ ಚೆಕ್ ನೀಡಿದ ತಪ್ಪಿಗೆ ಸೇವೆಯಿಂದ ಅಮಾನತುಗೊಂಡಿದ್ದಾರೆ.
ನಗರಸಭೆಯ ಶೇ.22.75 ಅನುದಾನ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶಿಕ್ಷಣ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದು ಆಯುಕ್ತ ಮಹೇಂದ್ರ ಕುಮಾರ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸ್ವಾತಂತ್ರ್ಯ ದಿನೋತ್ಸವ ಆಚರಣೆಗಾಗಿ ದೇಣಿಗೆ ನೀಡುವಂತೆ ನೀಡುವಂತೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ದೇಣಿಗೆ ನೀಡುವುದಕ್ಕೆ ಅವಕಾಶವಿಲ್ಲದಿದ್ದರೂ ಅದರಲ್ಲೂ ಶೇ.22.75ರ ಅನುದಾನದಲ್ಲಿ 10 ಲಕ್ಷ ರು. ದೇಣಿಗೆ ಚೆಕ್ ನೀಡಿದ್ದರಿಂದ ಆರೋಪಕ್ಕೆ ಗುರಿಯಾಗಿದ್ದರು.
ದೇಣಿಗೆ ಚೆಕ್ ಅನ್ನು ಸಿಆರ್ಇಸೆಲ್ ಅಧಿಕಾರಿಗಳು ನಗದೀಕರಣಗೊಳಿಸದೆ ಇಷ್ಟು ದೊಡ್ಡ ಮೊತ್ತದ ಹಣಕ್ಕೆ ಚೆಕ್ ನೀಡುವ ಹಿಂದೆ ಏನೋ ದುರುದ್ದೇಶವಿದೆ ಎಂದು ಅನುಮಾನಗೊಂಡು ಆಯುಕ್ತರಿಗೆ ಚೆಕ್ ವಾಪಸ್ ಮಾಡಿದ್ದರು.
ಆದರೆ, ಚೆಕ್ ನೀಡಿರುವ ವಿಚಾರದಲ್ಲಿ ಆಯುಕ್ತರು ಎಡವಿರುವುದನ್ನು ಎಲ್ಲ ಮಾಧ್ಯಮಗಳು ಬಹಿರಂಗ ಪಡಿಸಿದ್ದವು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತನಿಖೆಗೆ ಆದೇಶಿಸಿದ್ದರು.
ಸಚಿವರ ಸೂಚನೆ ಮೇರೆಗೆ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ನಗರಸಭೆ ಆಯುಕ್ತರಿಗೆ ಕಾರಣ ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡಿದ್ದರಲ್ಲದೆ, ವರದಿಯನ್ನು ಸರ್ಕಾರಕ್ಕೆ ರವಾನೆ ಮಾಡಿದ್ದರು.
ನಗರಸಭೆ ಆಯುಕ್ತರ ವಿರುದ್ಧ ಕೆಲವು ಸಂಘಟನೆಗಳು ಶೇ.22.75ರ ಅನುದಾನ ದುರ್ಬಳಕೆ ಮಾಡಿರುವುದರಿಂದ ಶಿಸ್ತಿನ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದ್ದರು.
ಮಹೇಂದ್ರ ಕುಮಾರ್ ದಕ್ಷ ಅಧಿಕಾರಿಯಾಗಿರುವುದರಿಂದ ಅವರನ್ನು ಅಮಾನತು ಮಾಡುವುದರಿಂದ ನಗರಸಭೆಯ ಆಡಳಿತಕ್ಕೆ ಹಿನ್ನಡೆಯಾಗುತ್ತದೆ ಎಂದು ಗುರುವಾರ ನಗರಸಭೆಯ ಕೆಲ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರಾದರೂ ಆಯುಕ್ತರ ಅಮಾನತು ತಪ್ಪಿಸಲು ಆಗಿಲ್ಲ.
ಮಹೇಂದ್ರ ಕುಮಾರ್ ಚೆಕ್ ನೀಡಬಾರದಿತ್ತು, ಸ್ವಾತಂತ್ರ್ಯ ದಿನೋತ್ಸವಕ್ಕೆ ದೇಣಿಗೆ ನೀಡಲು ಅನುದಾನವಿಲ್ಲವೆಂದು ಹೇಳಿ ಲಿಖಿತ ಮೂಲಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ತಿಳಿಸಬಹುದಾಗಿತ್ತು. ಚೆಕ್ ನೀಡಿ ತಪ್ಪು ಮಾಡಿದ್ದಾರೆ. ಸರ್ಕಾರ ಕೈಗೊಂಡ ನಿರ್ಧಾರವನ್ನು ರದ್ದುಪಡಿಸುವ ಅಧಿಕಾರ ನನಗಿಲ್ಲ, ವಿಚಾರಣೆ ಮುಗಿದು ತಪ್ಪಿತಸ್ಥರಲ್ಲವೆಂದು ಸಾಬೀತು ಆದಲ್ಲಿ ಮತ್ತೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶವಿದೆ ಎಂದು ನಗರಸಭೆ ಸದಸ್ಯರ ನಿಯೋಗಕ್ಕೆ ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು.
ಅಮಾನತುಗೊಂಡ ಮಹೇಂದ್ರ ಕುಮಾರ್ ಅವರು ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ, ಜೀವನಾಂಶ ಭತ್ಯೆಯನ್ನು ಪಡೆಯುವುದನ್ನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಪೌರ ಸುಧಾರಣಾ ಕೋಶದ ಉಪ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಆಧೀನ ಕಾರ್ಯದರ್ಶಿ ಕೆ.ವಿ.ರಾಮಪ್ಪ ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.