ಮೃತ ಜಾನುವಾರು ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ: ತಹಸೀಲ್ದಾರ್ ಭರವಸೆ
ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಕಾಲುಬಾಯಿ ಜ್ವರಕ್ಕೆ 15 ಸೀಮೆಹಸುಗಳು, 1 ಎಮ್ಮೆ, 4 ಮೇಕೆಗಳು ಮೃತಪಟ್ಟಿದ್ದು ಜಾನುವಾರುಗಳ ರೈತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ತಹಸೀಲ್ದಾರ್ ಜಿ.ಆರ್. ನಾಗರಾಜ್ ಹೇಳಿದರು.
ಅವರು ಮಾಸ್ತಿ ಹೋಬಳಿಯ ರಾಜೇನಹಳ್ಳಿ ಗ್ರಾಮದಲ್ಲಿ ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾ ಸಂಚಾಲಕ ಕೋಡೂರು ಕೆ.ವಿ. ಗೋಪಾಲ್ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಕಾಲು ಬಾಯಿ ಜ್ವರದಿಂದ ಬಳಲುತ್ತಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಮೃತಪಟ್ಟ ಜಾನುವಾರುಗಳ ರೈತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ಮಾಡಿದ ಮನವಿ ಮೇರೆಗೆ ಗ್ರಾಮಕ್ಕೆ ಆಗಮಿಸಿ ಮೃತಪಟ್ಟ ಜಾನುವಾರುಗಳ ರೈತರ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಡನೆ ಮಾತನಾಡಿ ರಾಜೇನಹಳ್ಳಿ, ಓಬಟ್ಟಿ, ಮಾತಂಗಪುರ, ಕೂರ್ನಹೊಸಹಳ್ಳಿ ಗ್ರಾಮಗಳಲ್ಲಿನ ಜಾನುವಾರುಗಳಲ್ಲಿ ಈ ರೋಗ ಕಾಣಿಸಿದ್ದು ಪಶು ವೈದ್ಯ ಇಲಾಖೆಯ ವೈದ್ಯರುಗಳು ಈ ಕಾಯಿಲೆಯನ್ನು ತಡೆಗಟ್ಟಲು ಗ್ರಾಮಗಳಲ್ಲಿ ವಾಸ್ತವ್ಯ ನೀಡಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ವೈದ್ಯರ ಅವಶ್ಯಕತೆ ಇರುವುದರಿಂದ ವೈದ್ಯರ ತಂಡವನ್ನು ಜಾನುವಾರುಗಳ ಚಿಕಿತ್ಸೆಗಾಗಿ ಕಳುಹಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದ್ದು ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಪಶು ವೈದ್ಯರು ತಮ್ಮ ಮನೆಗಳ ಬಳಿ ಬಂದಾಗ ಸಂಪೂರ್ಣ ಸಹಕಾರ ನೀಡಿ ಎಲ್ಲಾ ಹಸುಗಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸಿ ಹಾಗೂ ಜಾನುವಾರುಗಳ ಮೇಲೆ ವಿಮೆ ಮಾಡಿಸಿಕೊಳ್ಳುವಂತೆ ಹೇಳಿದರು.
ಹಸಿರು ಸೇನೆ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್, ರೈತ ಮುಖಂಡರಾದ ರಾಜೇನಹಳ್ಳಿ ಗೋಪಾಲ್, ವಿ. ವೆಂಕಟೇಶ್, ಮುನಿವೆಂಕಟಪ್ಪ, ಮಂಜುನಾಥ್, ಸಂಪಂಗಿರಾಮೇಗೌಡ, ದೊಡ್ಡಿ ವೆಂಕಟೇಶ್, ಪಶು ವೈದ್ಯರಾದ ಲಕ್ಷ್ಮಣ್‌ಗೌಡ, ನಿರೀಕ್ಷಕ ಪ್ರಭುದೇವ್, ಗ್ರಾ.ಪಂ. ಅಧ್ಯಕ್ಷ ಸಂಪತ್‌ಕುಮಾರ್, ಪಿಡಿಒ ಕೃಷ್ಣಪ್ಪ, ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಿಗ ಶ್ರೀನಿವಾಸ್. ಬಿಲಲ್ಕಲೆಕ್ಟರ್ ರಮೇಶ್ ಮುಂತಾದವರು ಉಪಸ್ಥಿತರಿದ್ದರು.