ವರ್ಗಾವಣೆ ರದ್ದತಿಗೆ ಆಗ್ರಹ
ಕೋಲಾರ: ಜಿಲ್ಲೆಯ ಅಥ್ಲೆಟಿಕ್ ತರಬೇತುದಾರ ಪಿ.ಎಲ್. ಶಂಕರಪ್ಪ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಕೋಲಾರ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೌರವ ಕಾರ್ಯದರ್ಶಿ ಕೆ. ಜಯದೇವ್ ಶಂಕರಪ್ಪನವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕ್ರೀಡಾಪಟುಗಳು 2012 ಮತ್ತು 2013ನೇ ಸಾಲಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕೀರ್ತಿ ತಂದಿರುವುದರಿಂದ ಇವರನ್ನು ಜಿಲ್ಲೆಯಲ್ಲಿ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಅಂಚೆ ಅಶ್ವತ್ಥ್, ಬುಸನಹಳ್ಳಿ ಆಂಜನಪ್ಪ, ಚಿನ್ನಪ್ಪ, ಕೆ. ಜಯರಾಂ, ಕೆ.ಆರ್. ತ್ಯಾಗರಾಜ್, ಕೀಲುಕೋಟೆ ಆಂಜನಪ್ಪ, ಮಹಮದ್ ಅಲಿ, ಬಿ.ವಿ. ಶಿವಕುಮಾರ್, ಸುಬ್ರಮಣಿ, ಕೋರಗಂಡಹಳ್ಳಿ ಕೃಷ್ಣೇಗೌಡ, ಶ್ರೀನಿವಾಸಮೂರ್ತಿ ಗಾಂಧಿನಗರ ರಾಜಣ್ಣ, ಕ್ರೀಡಾಪಟುಗಳಾದ ಎಸ್. ಚಂದ್ರು, ಶಂಕರ್, ವಿ. ಶಿವಕುಮಾರ್ ಇದ್ದರು.
ಕೆರೆಗಳ ಒತ್ತುವರಿ ತೆರವಿಗೆ ಆಗ್ರಹಿಸಿ ಮನವಿ
ಕೋಲಾರ: ಜಿಲ್ಲೆಯಲ್ಲಿನ ಎಲ್ಲಾ ಕೆರೆ, ರಾಜಕಾಲುವೆ, ಫೀಡರ್ ಚಾನಲ್ಗಳ ಒತ್ತುವರಿಯನ್ನು ತೆರವುಗೊಳಿಸಲು, ಕಲ್ಯಾಣಿಗಳ ಪುನಶ್ಚೇತನ, ಕೆರೆಗಳಲ್ಲಿ ಹೂಳೆತ್ತುವುದು ಹಾಗೂ ಅಕ್ರಮ ಮರಳು ದಂಧೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಿಗೆ ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜು, ಜಿಲ್ಲೆಯಲ್ಲಿನ ಅಂತರ್ಜಲ ಸಮಸ್ಯೆ ನಿವಾರಣೆಗಾಗಿ ದಿಟ್ಟ ಕ್ರಮದ ಅಗತ್ಯವಿದೆ ಎಂದು ಹೇಳಿದರು.
ಕೆರೆಗಳ ಒತ್ತುವರಿ ತೆರವುಗೊಳಿಸುವುದಕ್ಕೆ ಪ್ರತಿ ತಾಲೂಕಿನಲ್ಲಿ ಟಾಸ್ಕ್ಫೋರ್ಸ್ ರಚನೆ ಮಾಡುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ. ರವಿ ಜಿಲ್ಲೆಯ ಎಲ್ಲಾ ಕಂದಾಯ ಅಧಿಕಾರಿಗಳ ಸಭೆಯನ್ನು ಶೀಘ್ರವೇ ಕರೆದು ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಫೀಡರ್ ಚಾನಲ್ಗಳ ಬಗ್ಗೆ ಮಾಹಿತಿ ಪಡೆದು ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಸಂಘಟನಾ ಕಾರ್ಯದರ್ಶಿ ಬಿ.ವಿ. ಶಿವಕುಮಾರ್, ಮಹಮದ್ ಅಲಿ, ಎಸ್. ಪ್ರಸಾದ್, ಎಸ್.ಎಂ. ಶ್ರೀನಿವಾಸಮೂರ್ತಿ, ಗಾಂಧಿನಗರ ರಾಜಣ್ಣ, ಎಸ್. ರಾಮಚಂದ್ರಯ್ಯ, ಹಸಾಳ ಡಿ.ಎಸ್. ಸುಬ್ರಮಣಿ, ಕೋರಗಂಡಹಳ್ಳಿ ಕೆ.ಆರ್. ಕೃಷ್ಣೇಗೌಡ, ಕೆ.ಆರ್. ಮಂಜುನಾಥ್, ಕೆ.ಎನ್. ರಮೇಶ್ ಇದ್ದರು.