ವಸ್ತುನಿಷ್ಠ ವರದಿ ಜವಾಬ್ದಾರಿ ಪತ್ರಕರ್ತರದ್ದು: ಸುಬ್ಬಾರೆಡ್ಡಿ
ಕ.ಪ್ರ.ವಾರ್ತೆ ಗುಡಿಬಂಡೆ ಆ.22
ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳು ಸಮಾಜದ ಮೇಲೆ ಪ್ರಭಾವ ಬೀರುವುದರಿಂದ, ಸತ್ಯ ಹಾಗೂ ವಸ್ತುನಿಷ್ಠ ವರದಿ ನೀಡುವ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ, ಸಮೂಹ ಮಾಧ್ಯಮಗಳು ಸಮಾಜದ ಕನ್ನಡಿ ಇದ್ದಂತೆ. ಸಮಾಜವನ್ನು ಸುವ್ಯವಸ್ಥೆಗೊಳಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಪ್ರಪಂಚದಲ್ಲಿ ನಡೆದಕೆಲವೊಮ್ಮೆ ಪ್ರಮುಖ ಘಟನೆಗಳು ಬೆಳಕಿಗೆ ಬಂದಿದ್ದು ಪತ್ರಿಕೆಗಳಿಂದ ಮಾತ್ರ ಎಂದು ಅಭಿಪ್ರಾಯಪಟ್ಟರು.
ವಕೀಲ ಜಿ.ವಿ. ವಿಶ್ವನಾಥ್ ಮಾತನಾಡಿ, ಸಮಾಜದ ಹಾಗು-ಹೋಗುಗಳನ್ನು ಪರಿಣಾಮಕಾರಿಯಾಗಿ ಸಮಾಜದ ಮುಂದಿಡುವ ಪ್ರಯತ್ನ ಪತ್ರಕರ್ತರಿಂದ ಆಗಬೇಕಾಗಿದೆ. ಸತ್ಯಾಸತ್ಯಯತೆಯ ಬಗ್ಗೆ ಅರಿವು ಹಾಗೂ ಸಾಮಾಜಿಕ ಕಾಳಜಿ ಪತ್ರಕರ್ತನಲ್ಲಿರಬೇಕು. ಪತ್ರಿಕೋದ್ಯಮದ ಮಹತ್ವ ಹಾಗೂ ಪತ್ರಿಕೆಗಳು ಬೆಳೆದು ಬಂದ ರೀತಿಯನ್ನು ತಿಳಿಸಿದರು.
ಜಿ.ಪಂ. ಸದಸ್ಯ ಅಶ್ವತ್ಥಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಂದ್ರೇಶ್, ಸದಸ್ಯ ನಾರಾಯಣಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಎಎಸ್ಐ ಸಾದಪ್ಪ, ಕಂದಾಯ ಇಲಾಖೆಯ ಸಿಗ್ಬತ್ತುಲ್ಲಾ, ಪ.ಪಂ. ನೂತನ ಸದಸ್ಯರು ಸೇರಿದಂತೆ ಹಲವರಿದ್ದರು.