ಸಮಾಜ ಅಭಿವೃದ್ಧಿಗೆ ಶ್ರಮಿಸಿ: ಜಿಲ್ಲಾಧಿಕಾರಿ
ಕೋಲಾರ: ಸಮಾಜದ ಅಭ್ಯುದಯಕ್ಕಾಗಿ ಸಂಕಲ್ಪದಿಂದ ಕಾರ್ಯನಿರ್ವಹಿಸಿ ಎಂದು ನೂತನ ಜಿಲ್ಲಾಧಿಕಾರಿ ಡಿ.ಕೆ.ರವಿ ಸರ್ಕಾರಿ ನೌಕರರಿಗೆ ಕರೆ ನೀಡಿದರು. ಜಿಲ್ಲಾ ನೌಕರರ ಭವನದಲ್ಲಿ ಸರ್ಕಾರಿ ನೌಕರರ ಸಂಘ ನೀಡಿದ ಸ್ವಾಗತ ಸ್ವೀಕರಿಸಿ ಅವರು ಮಾತನಾಡುತ್ತಾ ಸಾಮಾಜಿಕ ಸೇವೆ ನಿಮ್ಮೆಲ್ಲರ ಧ್ಯೇಯವಾಗಲಿ ಎಂದ ಅವರು, ಜಿಲ್ಲೆ ಶೋಷಿತರ, ಬಡವರ ಸೇವೆ ಮಾಡಿ ಎಂದು ಸಲಹೆ ನೀಡಿದರು. ಜನತೆಯ ಕೆಲಸ ಕಾರ್ಯಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಅವರಿಗೆ ಹತ್ತಿರವಾಗಬೇಕು, ಅವರ ಪ್ರೀತಿ ಸಂಪಾದಿಸಬೇಕೆಂದು ಕಿವಿಮಾತು ಹೇಳಿದರು. ಜಿಲ್ಲೆ ನೀರಿನ ಸಂಕಷ್ಟ ಎದುರಿಸುತ್ತಿದ್ದು, ಅಂತರ್ಜಲ ಉಳಿವಿಗೆ, ನೀರಿನ ಮಿತ ಬಳಕೆಗೆ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನೌಕರರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ನೌಕರರ ಸಮಸ್ಯೆಗಳು ಹಲವಾರಿದ್ದು, ಅವುಗಳಿಗೂ ಜಿಲ್ಲಾಧಿಕಾರಿಗಳು ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಸಂಘದ ಸತ್ಸಂಪ್ರದಾಯದಂತೆ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕೋರುತ್ತಿದ್ದು, ಅವರ ಅಭಿವೃದ್ಧಿದಾಯಕ ಸೂಚನೆಯನ್ನು ಪಾಲಿಸಿ ಜನರ ಸಮಸ್ಯೆಗಳ ನಿವಾರಣೆಗೆ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಮುಖಂಡ ಎಲ್.ಎ.ಮಂಜುನಾಥ್, ಜಿಲ್ಲಾ ಗೌರವಾಧ್ಯಕ್ಷ ರವಿಚಂದ್ರ, ಪ್ರಧಾನ ಕಾರ್ಯದರ್ಶಿ ಅಶೋಕ್, ಖಚಾಂಚಿ ರಂಗಯ್ಯ, ಉಪಾಧ್ಯಕ್ಷರಾದ ರಂಗಪ್ಪ, ರಾಜ್ಯ ಸಮಿತಿ ಸದಸ್ಯ ನಾಗರಾಜ್, ಸಂಘದ ಚುನಾವಣಾಧಿಕಾರಿ ನರಸಿಂಹಯ್ಯ, ವೆಂಕಟಶಿವಪ್ಪ ಮತ್ತಿತರರು ಇದ್ದರು.
ಇಂದು ವಿಚಾರ ಸಂಕಿರಣ
ಕೋಲಾರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬಸವರಾಜ ಕಟ್ಟಿಮನಿ ಟ್ರಸ್ಟ್, ಬೆಳಗಾವಿ, ಹಾಗೂ ನುಡಿ ಮಂಟಪ, ಸರ್ಕಾರಿ ಬಾಲಕರ ಕಾಲೇಜು, ಕೋಲಾರ ಇವರ ಸಹಯೋಗದಲ್ಲಿ ಬಸವರಾಜ ಕಟ್ಟೀಮನಿ ಬದುಕು-ಬರಹ ವಿಚಾರ ಸಂಕಿರಣವನ್ನು ಆ.23 ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಸರ್ಕಾರಿ ಬಾಲಕರ ಕಾಲೇಜಿನ ಪಿ.ಜಿ.ಬ್ಲಾಕ್ನಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಜೆ.ಜಿ.ನಾಗರಾಜ್ ಆಶಯನುಡಿಗಳನ್ನಾಡಲಿದ್ದು, ಕಾರ್ಯಕ್ರಮವನ್ನು ಪತ್ರಕರ್ತ ವಾಸುದೇವ ಹೊಳ್ಳ ಉದ್ಘಾಟಿಸಲಿದ್ದಾರೆ. ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಎಚ್.ಎಸ್.ಸತ್ಯನಾರಾಯಣರವರು ಕಟ್ಟೀಮನಿ ಬದುಕು- ಒಂದು ನೋಟ ಕುರಿತು ಉಪನ್ಯಾಸ ನೀಡಲಿದ್ದು, ಕೊಡಗು ಜಿಲ್ಲೆಯ ಕೂಡಿಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಡಾ. ಪ್ರಕಾಶ್ರಿಂದ ಕಟ್ಟೀಮನಿ ಕಥೆಗಳು ಒಂದು ಅವಲೋಕನ ಕುರಿತು ಉಪನ್ಯಾಸವಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರುದ್ರೇಶ್ ಬಿ.ಅದರಂಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸರ್ಕಾರಿ ಬಾಲಕರ ಕಾಲೇಜಿನ ಪ್ರಾಂಶುಪಾಲರಾದ ಜಿ.ವೆಂಕಟೇಶ್ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಡಿ ಮಡಿದವರು ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದೇ ದಿನ ಬೆಳಗ್ಗೆ 11.45ಕ್ಕೆ ನಿರ್ಗಮಿತ ಜಿಲ್ಲಾಧಿಕಾರಿ ಡಾ. ಡಿ.ಎಸ್.ವಿಶ್ವನಾಥ್ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಕಸಾಪ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ಕಳ್ಳತನ: ಆರೋಪಿ ಸೆರೆ
ಗೌರಿಬಿದನೂರು: ಪಟ್ಟಣದಲ್ಲಿ ಎರಡು ಮನೆಗಳಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೆರೆಯ ಆಂಧ್ರದ ಹಿಂದೂಪುರ ಪಟ್ಟಣದಲ್ಲಿನ ಚೌಡೇಶ್ವರಿ ಕಾಲೋನಿಯ ರಾಮಪ್ಪ ಪುತ್ರ ರಾಮಕೃಷ್ಣ (52) ಬಂಧಿತ ಆರೋಪಿ. ಬಂಧಿತ ಆರೋಪಿ ಈ ಹಿಂದೆ ಮಂಚೇನಹಳ್ಳಿಯಲ್ಲಿ ತನ್ನ ಕೈಚಳಕ ತೋರಿಸಿದ್ದಾನೆ. ದರೋಡೆ ಮುಂತಾದ ಅಪರಾದಗಳಲ್ಲಿ ಭಾಗಿಯಾಗಿದ್ದರಿಂದ ಸೆರೆಮನೆ ವಾಸ ಅನುಭಸಿದ್ದಾನೆ. ಈಗ ಮತ್ತೆ ಮನೆ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದಾನೆ.