ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

Srinivasa Murthy VN
Updated On : 22 Aug 2013, 11:50 am

ಗೌರಿಬಿದನೂರು: ಹೋಬಳಿಯ ಹಳೇಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಅವಿರೋಧ ಆಯ್ಕೆ ಮಾಡಲಾಗಿದ್ದು, ಯಾವುದೇ ರಾಜಕೀಯ, ಪ್ರತಿಷ್ಠೆ ಇಲ್ಲದೆ ಸಹಕಾರ ಸಂಘದ ಆರ್ಥಿಕ ಹಿತದೃಷ್ಟಿಯಿಂದ ಸಮಾನ ಮನಸ್ಕರು, ಮೀಸಲಾತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಸದಸ್ಯರಾಗಿ ಬಸವರಾಜು ಎಚ್.ವಿ. ಕುಮಾರ್ ಎಚ್.ಎಸ್. ಶಿವಕುಮಾರ್, ರಾಜಣ್ಣ (ಹಿ.ವರ್ಗ), ಮೈಲಾರಪ್ಪ ಎಚ್.ವಿ.ಎಸ್. ವೆಂಕಟೇಶ, ರಾಮಚಂದ್ರ, ರಮೇಶ (ಎಸ್‌ಸಿ) ದೇವಮ್ಮ (ಮ. ಮೀಸಲು) ಮಂಜುಳ ಈ ಮೇಲ್ಕಂಡ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಉಪ್ಪರಹಳ್ಳಿ ಸಂಘ: ಮಂಚೇನಹಳ್ಳಿ ಹೋಬಳಿಯ ಉಪ್ಪರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಅವಿರೋಧವಾಗಿ ಈ ಕೆಳಕಂಡ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜನಾರ್ಧನಗೌಡ, ಎನ್.ಮಹೇಶ್, ಎನ್.ಅಂಬರೀಶ್, ಆರ್.ನಾಗರಾಜು, ಆರ್.ಆನಂದ್, ಎಚ್.ಕೆ.ಅಶ್ವತ್ಥಪ್ಪ, ಚಲಪತಿ, ಮಮತಾ, (ಮೀಸಲು) ನರಸಮ್ಮ(ಎಸ್.ಸಿ.) ಎನ್.ರಂಗಪ್ಪ (ಎಸ್.ಟಿ.), ಕೆ.ಸಿ. ಶ್ರೀನಿವಾಸ್‌ಗೌಡ ಮೇಲ್ಕಂಡ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಕೋಮಲ್ ನಿರ್ದೇಶಕರು ಹಾಲು ಉತ್ಪಾದಕರ ಸಂಘಗಳಲ್ಲಿ ಅವಿರೋಧ ಆಯ್ಕೆಯಾಗಿರುವುದು ಶ್ಲಾಘನೀಯ. ಸಹಕಾರ ಸಂಘದ ಉತ್ತಮ ಬೆಳವಣಿಗೆ ಸಂಘಗಳಿಗೆ ಆರ್ಥಿಕ ವೆಚ್ಚವಿಲ್ಲದೆ, ರಾಜಕೀಯ ದ್ವೇಷ ಅಸೂಯೆ ಇಲ್ಲದೆ ಹಳೇಹಳ್ಳಿ ಹಾಗೂ ಉಪ್ಪರಹಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು ಉತ್ತಮವಾದದ್ದು ಎಂದು ಶಾಸಕ ಎಸ್.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.

ಗಡಿಭಾಗದಲ್ಲಿ ಸಮಸ್ಯೆ; ಮನವಿ
ಶ್ರೀನಿವಾಸಪುರ:
ತೆಲಂಗಾಣ ಮತ್ತು ಸಿಮಾಂಧ್ರ ಸಮಸ್ಯೆ ಮುಗಿಯದ ಕಾರಣದಿಂದ ಕರ್ನಾಟಕ ಗಡಿಭಾಗದಲ್ಲಿ ಬೆಂಗಳೂರು-ಕಡಪಾ ರಸ್ತೆಯಲ್ಲಿ ಸುಮಾರು ದಿನಗಳಿಂದ ರಸ್ತೆ ತಡೆ ನಡೆಯುತ್ತಿರುವುದರಿಂದ ತಾಲೂಕಿನ ಆಂಧ್ರಪ್ರದೇಶದ ಗಡಿಭಾಗದ ವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಕರ್ನಾಟಕ ಗಡಿಭಾಗದ ಗ್ರಾಮಗಳಲ್ಲಿನ ರೈತಾಪಿಗಳಲ್ಲದೆ ನೂರಾರು ಮಂದಿ ಆಸ್ಪತ್ರೆಗಳಿಗೂ ಮದನಪಲ್ಲಿ ಹೋಗಬೇಕಾಗಿತ್ತು. ಆದರೆ ಆಂಧ್ರಪ್ರದೇಶ ತೆಲಂಗಾಣ ಮತ್ತು ಸೀಮಾಂಧ್ರ ಕಾರ್ಯಕರ್ತರ ಮಧ್ಯೆ ರಾಜ್ಯದ ಗಡಿಭಾಗದ ನಾಗರಿಕರು ಬಲಿಪಶುಗಳಾಗುತ್ತಿದ್ದಾರೆ. ತೆಲಂಗಾಣ ಮತ್ತು ಸೀಮಾಂಧ್ರ ಸಮಸ್ಯೆ ಶೀಘ್ರವೇ ಬಗೆ ಹರಿಸಿಕೊಡಬೇಕಾಗಿ ಕೇಂದ್ರ ಸರ್ಕಾರವನ್ನು ಗಡಿಭಾಗದ ನಾಗರಿಕರು ಒತ್ತಾಯಿಸಿದ್ದಾರೆ.

ರಸ್ತೆಗಳ ಗುಂಡಿ ಮುಚ್ಚಲು ದಲಿತ ಸಿಂಹಸೇನೆ ಆಗ್ರಹ
ಬಂಗಾರಪೇಟೆ:
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಅನಾನುಕೂಲವಾಗಿದ್ದು ರಸ್ತೆ ಅವಘಡಗಳು ಸಂಭವಿಸುತ್ತಿವೆ. ಕೂಡಲೇ ಗುಂಡಿಗಳನ್ನು ಮುಚ್ಚಿಸಬೇಕೆಂದು ಒತ್ತಾಯಿಸಿ ದಲಿತ ಸಿಂಹ ಸೇನೆ ಮುಖಂಡರು ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಪಟ್ಟಣ ಮುಖಾಂತರ ಕೋಲಾರ-ಕೆಜಿಎಫ್ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಇಂತಹ ರಸ್ತೆಯಲ್ಲಿ ಹಲವು ವರ್ಷಗಳಿಂದ ರಸ್ತೆಯಲ್ಲಿ ಹಳ್ಳಗಳು ನಿರ್ಮಾಣವಾಗಿ ಮಳೆ ಬಂದರೆ ನೀರು ತುಂಬಿಕೊಂಡು ವಾಹನಗಳು ಸಂಚರಿಸುವಾಗ ಮುಗ್ಗರಿಸಿ ಬೀಳುವಂತಾಗಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ಮಾಡಿದರೂ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆಂದು ಖಂಡಿಸಿದರು. ಈ ರಸ್ತೆಯನ್ನು ಜನರ ಹಿತದೃಷ್ಟಿಯಿಂದ ದ್ವಿಪಥ ರಸ್ತೆಯಾಗಿ ಪರಿವರ್ತಿಸಬೇಕು ಎಂದೂ ಆಗ್ರಹಿಸಿ ಅಧಿಕಾರಿಗಳನ್ನು ಕಚೇರಿಯೊಳಗೆ ಅರ್ಧಗಂಟೆ ದಿಗ್ಬಂಧನ ಹಾಕಿದರು. ತೆರೆದುಕೊಂಡಿರುವ ಹಳ್ಳಗಳನ್ನು ಕೂಡಲೆ ಮುಚ್ಚಿಸುವುದಾಗಿ ಅಧಿಕಾರಿ ವರ್ಗದಿಂದ ಬಂದ ಉತ್ತರದಿಂದ ಸಮಾಧಾನಗೊಂಡು ಪ್ರತಿಭಟನೆಯನ್ನು ಕೈಬಿಟ್ಟರು. ಪ್ರತಿಭಟನೆ ನೇತೃತ್ವವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್,ನಗರ ಅಧ್ಯಕ್ಷ ಹುಣಸನಹಳ್ಳಿ ರಮೇಶ್,ಪಿಳ್ಳಪ್ಪ, ಅಯ್ಯಪ್ಪ, ಕುಪೇಂದ್ರ, ನಂದ,ಮಂಜುನಾಥ್ ವಹಿಸಿದ್ದರು.

ಶ್ರೀ ರಾಘವೇಂದ್ರಸ್ವಾಮಿ ಮಹೋತ್ಸವ
ಮಾಲೂರು
: ಗುರುಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿಗಳವರ 342ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಧ್ಯಮಾರಾಧನೆಯನ್ನು ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಮಹಾಮಂಗಳಾರತಿ  ಅಲಂಕಾರ ಸೇವೆ ನಡೆಯಿತು. ಬೆಳಗ್ಗೆ ಶ್ರೀ ಗುರುರಾಯರ ಆರಾಧನಾದ ಮಧ್ಯಮಾರಾಧನೆಯ ಅಂಗವಾಗಿ ಶ್ರೀರಾಯರ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಹಿಳಾ ಭಕ್ತ ಮಂಡಳಿ ವತಿಯಿಂದ ಮೆರವಣಿಗೆಯಲ್ಲಿ ಭಜನೆ ನಡೆಯಿತು. ಬ್ರಾಹ್ಮಣರ ಸಂಘ ಅಧ್ಯಕ್ಷ ನಾಗರಾಜ್ ರಾವ್, ಭದ್ರಿನಾಥ್ ಇತರರಿದ್ದರು.

ಮುನೇಶ್ವರಸ್ವಾಮಿ ತಿಂಗಳ ಹುಣ್ಣಿಮೆ
ಚಿಂತಾಮಣಿ:
ತಾಲೂಕಿನ ಕಾಗತಿ ಗ್ರಾಮ ಪಂಚಾಯಿತಿಗೆ ಸೇರಿದ ಬಡಗವಾರಹಳ್ಳಿಯ ಶ್ರೀ ಮುನೇಶ್ವರಸ್ವಾಮಿ ದೇಗುಲದಲ್ಲಿ ಏರ್ಪಡಿಸಿದ್ದ ತಿಂಗಳ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಶ್ರದ್ಧಾಭಕ್ತಿಗಳಿಂದ ಭಜನೆ, ಕೀರ್ತನೆ, ತತ್ವಪದ ಹಾಗೂ ಭಕ್ತಿಗೀತೆಗಳನ್ನು ರಾತ್ರಿಯಿಡಿ ಹಾಡುವುದರ ಮೂಲಕ ಹುಣ್ಣಿಮೆಯ ರಾತ್ರಿ ಭಕ್ತಿಸುಧೆ ಹರಿಸಿದರು. ಗಾಯಕ ಬೊಮ್ಮೇಪಲ್ಲಿ ವೆಂಕಟೇಶಪ್ಪ ಮಾತನಾಡಿ, ಹುಣ್ಣಿಮೆಯ ಬೆಳಕು ಪಾವಿತ್ರ್ಯತೆಯ ಸಂಕೇತ ಎಂದರು. ಜಾನಪದ ಕಲಾವಿದ ಸೀಕಲ್ ನರಸಿಂಹಪ್ಪ ಭಕ್ತಗೀತೆಗಳ ಹಾಡಿದರು. ಚೊಕ್ಕರೆಡ್ಡಿಹಳ್ಳಿ ಹಾಗೂ ಬಡಗವಾರಹಳ್ಳಿಯ ಭಜನ ತಂಡಗಳಿಂದ ಗಾನಲಹರಿಗೆ ಮುರುಗಮಲ್ಲ ಕೃಷ್ಣಪ್ಪ ಹಾಗೂ ಅಪ್ಪಯ್ಯ ಪಕ್ಕವಾದ್ಯಗಳನ್ನು ನುಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement