ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಕ್ಕಾಗಿ ಜೆಡಿಎಸ್‌ನಲ್ಲಿ ಪೈಪೋಟಿ ಸಂಭವ

Srinivasa Murthy VN
Updated On : 25 Aug 2013, 12:34 pm

-ಪಾ.ಶ್ರೀ.ಅನಂತರಾಮ್
ಕ.ಪ್ರ.ವಾರ್ತೆ ಕೋಲಾರ ಆ. 24
ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಸೆಪ್ಟೆಂಬರ್ 6ರಂದು ಚುನಾವಣೆ ನಿಗದಿಪಡಿಸಿ ಪ್ರಾದೇಶಿಕ ಆಯುಕ್ತರು ಆಧಿಸೂಚನೆ ಹೊರಡಿಸಿದ್ದಾರೆ.
ಕಳೆದ ಆ.18 ರಂದು ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ ಹಾಗೂ ಉಪಾಧ್ಯಕ್ಷೆ ರತ್ನಮ್ಮ ಗಣೇಶ್ ಅವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರಂದ ಎರಡೂ ಹುದ್ದೆಗಳು ಖಾಲಿ ಆಗಿತ್ತು. ಈ ಮಧ್ಯೆ ರಾಜ್ಯ ಸರ್ಕಾರ ಜೆಡಿಎಸ್ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಾಗರಾಜು ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿತ್ತು.
ಹೆಚ್ಚು ಕಾಲ ಹಂಗಾಮಿ ಅಧ್ಯಕ್ಷರು ಅಧಿಕಾರ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಪ್ರಾದೇಶಿಕ ಆಯುಕ್ತರು ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಸೆ. 6 ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಚುನಾವಣೆ ನಡೆಸಲು ಆಧಿಸೂಚನೆ ಪ್ರಕಟಿಸಿದ್ದಾರೆ.
2011ರಲ್ಲಿ ನಡೆದ ಕೋಲಾರ ಜಿಲ್ಲಾ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ನಿಗದಿ ಮಾಡಿದ್ದ ಮೀಸಲಾತಿಯೇ ಈಗಲೂ ಮುಂದುವರೆದಿದೆ. ಚುನಾವಣೆ ಪ್ರಕ್ರಿಯೆ ಸೆ. 6ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾಲಾವಕಾಶ ನಿಗದಿ ಮಾಡಲಾಗಿದೆ. ಅನಿವಾರ್ಯವಾದಲ್ಲಿ ಮಾತ್ರ ಅಂದು ಮಧ್ಯಾಹ್ನ 2 ಗಂಟೆಗೆ ಎರಡೂ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪ್ರಾದೇಶಿಕ ಆಯುಕ್ತರು ಇದಕ್ಕಾಗಿ ನಡೆಯಲಿರುವ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕೋಲಾರ ಜಿಪಂ ಒಟ್ಟು ಸದಸ್ಯರ ಬಲ 28. ಈ ಪೈಕಿ ಜೆಡಿಎಸ್ 13, ಕಾಂಗ್ರೆಸ್ 5, ಬಿಜೆಪಿ 7, ವರ್ತೂರ್ ಬಣ 2 ಹಾಗೂ ಪಕ್ಷೇತರ 1 ಸದಸ್ಯರಿದ್ದಾರೆ. ಮೊದಲನೇ ಅವಧಿಗೆ ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ ಅಧ್ಯಕ್ಷರಾಗುವುದಕ್ಕೆ ಅವಕಾಶವಿದ್ದರಿಂದ ಬೇರೆ ಪಕ್ಷಗಳಿಂದ ಬಿಸಿಎಂ ಮಹಿಳೆ ಆಯ್ಕೆ ಇಲ್ಲದೆ ಬಿಜೆಪಿಗೆ ಬಹುಮತದ ಕೊರತೆಯಿದ್ದರೂ ಅಧ್ಯಕ್ಷ ಸ್ಥಾನ ಲಭ್ಯವಾಗಿತ್ತು.
ಮಾಲೂರು ತಾಲೂಕಿನ ಲಕ್ಕೂರಿನ ಜಿಪಂ ಸದಸ್ಯ ಮಂಜುಳಾ ವೆಂಕಟೇಶ್ ಅಧ್ಯಕ್ಷರಾಗಿ, ಜೆಡಿಎಸ್‌ನ ಶ್ರೀನಿವಾಸಪುರ ತಾಲೂಕಿನ ಸೋಮಶೇಖರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಬಿಜೆಪಿಯ ಮಂಜುಳ ಒಪ್ಪಂದದ ಪ್ರಕಾರ 10 ತಿಂಗಳ ಅಧಿಕಾರ ಪೂರೈಸಿ ತಮ್ಮ ಪಕ್ಷದ ಸೀಮೋಲ್ ಮೋಹನ್ ಇಲ್ಲವೇ ವರ್ತೂರ್ ಬಣಕ್ಕೆ ಅಧಿಕಾರ ಬಿಟ್ಟುಕೊಡಬೇಕಾಗಿತ್ತಾದರೂ ವೇಮಗಲ್ ಕ್ಷೇತ್ರದ ಜಿಪಂ ಸದಸ್ಯ ಭಾರತಿ ಪುಟ್ಟಸ್ವಾಮಾಚಾರ್ ಅಕಾಲಿಕ ನಿಧನದಿಂದಾಗಿ ನಡೆದ ಉಪಾಚುನಾವಣೆಯಲ್ಲಿ ಜೆಡಿಎಸ್‌ನ ಆಶಾ ಲೋಕೇಶ್ ಆಯ್ಕೆಯಾದ ನಂತರ ಅಧಿಕಾರ ಬಿಟ್ಟುಕೊಡದೆ ಮಂಜುಳ ಅಧ್ಯಕ್ಷರಾಗಿ ಮುಂದುವರಿದಿದ್ದರಿಂದ ಬಿಜೆಪಿಯಲ್ಲಿ ಸೀಮೋಲ್ ಮೋಹನ್ ಬಂಡಾಯವೆದ್ದು ಜೆಡಿಎಸ್ ಕಡೆ ಒಲವು ವ್ಯಕ್ತಪಡಿಸಿದ್ದರು.
ಕೆಲ ತಿಂಗಳು ಅಧಿಕಾರ:ಈ ಮಧ್ಯೆ ಜೆಡಿಎಸ್‌ನ ಸೋಮಶೇಖರ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಕಾಂಗ್ರೆಸ್‌ನ ವಡಗೂರು ಹರೀಶ್ ಚುನಾಯಿತರಾಗಿ ಕೆಲ ತಿಂಗಳು ಅಧಿಕಾರ ನಡೆಸಿದರು.
ಜಿಪಂನ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಯಿತು. ಕಾಂಗ್ರೆಸ್ ಪಕ್ಷದವರು ಅ.ಮು. ಲಕ್ಷ್ಮೀನಾರಾಯಣ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸುವುದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು.
ವಕ್ಕಲೇರಿಯ ಸದಸ್ಯ ಚೌಡೇಶ್ವರಿ ರಾಮಚಂದ್ರ ವರ್ತೂರ್ ಬಣಕ್ಕೆ ಕೈಕೊಟ್ಟು ಇತ್ತ ಕಾಂಗ್ರೆಸ್ ಪಕ್ಷದವರಿಗೂ ನಿರಾಸೆಯನ್ನು ಉಂಟು ಮಾಡಿ ಜೆಡಿಎಸ್ ಸೇರುವ ಮೂಲಕ ಅಧ್ಯಕ್ಷಗಿರಿ ಸಂಪಾದಿಸಿದರು. ಜೆಡಿಎಸ್‌ಗೆ ಬಹುಮತವಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿಯ ರತ್ನಮ್ಮ ಗಣೇಶ್ ಆಯ್ಕೆಯಾಗಿದ್ದರು. ಪಕ್ಷೇತರರಾಗಿ ಗೆದ್ದು ಕಾಲಕ್ಕೆ ತಕ್ಕಂತೆ ರಾಜಕೀಯ ನಿರ್ಧಾರ ಬದಲಾಯಿಸಿದ ಎಂ.ಎಸ್. ಆನಂದ್ ಕಾಂಗ್ರೆಸ್ ಜತೆ ಗುರುತಿಸಿಕೊಂಡು ಅಲ್ಲೂ ಸಲ್ಲದೆ ಜೆಡಿಎಸ್ ಸೇರಿದ ಚೌಡೇಶ್ವರಿ ಪರವಾಗಿ ಮತ ಹಾಕುವ ಮೂಲಕ ಕಾಂಗ್ರೆಸ್ಸಿನ ಅ.ಮು. ಲಕ್ಷ್ಮೀನಾರಾಯಣ ಆಸೆಗೆ ತಣ್ಣೀರು ಎರಚಿದರು.
ಬಹುಮತವಿಲ್ಲ: ಸೆ. 6ರಂದು ನಡೆಯಲಿರುವ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಎಂ.ಎಸ್. ಆನಂದ್ ಯಾರಿಗೆ ಬೆಂಬಲ ನೀಡುತ್ತಾರೋ ಕಾದು ನೋಡಬೇಕಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರ ಹಿಡಿಯುವಷ್ಟು ಸದಸ್ಯರ ಬಹುಮತವಿಲ್ಲ. ಜೆಡಿಎಸ್‌ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.  ವೇಮಗಲ್ ಉಪಾಚುನಾವಣೆಯಲ್ಲಿ ಗೆದ್ದ ಆಶಾ ಲೋಕೇಶ್‌ಗೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದ್ದ ಜೆಡಿಎಸ್ ಮುಖಂಡರು ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲಿಲ್ಲ.
ಸೆ.6 ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗಬಹುದೆಂದು ಶ್ರೀನಿವಾಸಪುರದ ಜೆಡಿಎಸ್ ಹಿರಿಯ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಕಳೆದ ಬಾರಿ ಅವಕಾಶ ವಂಚಿತರಾಗಿರುವ ಆಶಾ ಲೋಕೇಶ್, ಮುಳಬಾಗಿಲಿನ ಕಿಟ್ಟಪ್ಪ, ಹಂಗಾಮಿ ಅಧ್ಯಕ್ಷ ನಾಗರಾಜು, ಜೆಡಿಎಸ್ ಬೆಂಬಲಿತ ಬಿಜೆಪಿಯ ಸೀಮೋಲ್ ಮೋಹನ್, ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ರತ್ನಮ್ಮ ನಂಜೇಗೌಡ ಅವರು ನಿರೀಕ್ಷೆಯಲ್ಲಿದ್ದು, ಜೆಡಿಎಸ್ ವರಿಷ್ಠರು ಯಾರನ್ನು ಬೆಂಬಲಿಸುತ್ತಾರೆಂಬುದು ಇನ್ನು ಒಂದು ವಾರದಲ್ಲಿ ತಿಳಿಯಲಿದೆ.
ಪ್ರಾಥಮಿಕ ಹಂತದ ಸಭೆ: ಕಾಂಗ್ರೆಸ್ ನಾಯಕರು ಸಹ ಚುನಾವಣೆಗೆ ಸ್ಪರ್ಧಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲು ಭಾನುವಾರ ಪ್ರಾಥಮಿಕ ಹಂತದ ಸಭೆ ನಡೆಸಲಿದ್ದಾರೆ. ಕಳೆದ ಸಾರಿ ಸೋತಿರುವ ಕಾಂಗ್ರೆಸ್ ಪಕ್ಷದ ಅ.ಮು. ಲಕ್ಷ್ಮೀನಾರಾಯಣ ಅವರನ್ನೇ ಅಭ್ಯರ್ಥಿ ಮಾಡುವುದೇ ಇಲ್ಲದೆ ವಿರೋಧ ಪಕ್ಷದ ಸದಸ್ಯರನ್ನು ಸೆಳೆಯುವಂತಹ ಗಟ್ಟಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೇ ಎಂಬುದನ್ನು ಚರ್ಚಿಸಿ ಒಂದು ವಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಾಂಗ್ರೆಸ್ ಹಿರಿಯ ಶಾಸಕ ರಮೇಶ್‌ಕುಮಾರ್, ಬಂಗಾರಪೇಟೆಯ ಕೆ.ಎಂ.ನಾರಾಯಣಸ್ವಾಮಿ, ಮುಳಬಾಗಿಲಿನ ಕೊತ್ತೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್ ಸೇರಿದಂತೆ ಪ್ರಮುಖರು ಪ್ರಾಥಮಿಕ ಸಭೆ ನಡೆಸಿ ನಂತರ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರ ಮಾರ್ಗದರ್ಶನದಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ನಿರ್ಧರಿಸಲಿದ್ದಾರೆಂದು ತಿಳಿದು ಬಂದಿದೆ.
ಕಾರ್ಯತಂತ್ರ: ವರ್ತೂರ್ ಬಣದ ಅಮರನಾಥ್ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡು ಜೆಡಿಎಸ್ ವಿರುದ್ಧ ತಂತ್ರಗಾರಿಕೆ ರೂಪಿಸುವುದಕ್ಕೆ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ ಬಿಜೆಪಿಯ 7 ಮಂದಿ ಸದಸ್ಯರ ಪೈಕಿ ಮಾಲೂರಿನ 5 ಮಂದಿ ಸದಸ್ಯರು ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಅವರ ಮಾರ್ಗದರ್ಶನದಂತೆ ನಡೆಯಲು ಬದ್ಧರಾಗಿರುವುದರಿಂದ ಈ ಸದಸ್ಯರ ಬಲದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದ್ದು, ಸೆ. 6ರಂದು ಬೆಳಿಗ್ಗೆ 10 ಗಂಟೆಗೆ ಯಾರು ಮೇಲುಗೈ ಸಾಧಿಸಲಿದ್ದಾರೆಂಬುದು ಬಯಲಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement