ಇಂಗ್ಲಿಷ್ ಉಪನ್ಯಾಸಕರ ನೇಮಿಸಿ
ಕ.ಪ್ರ.ವಾರ್ತೆ, ಕೋಲಾರ, ಆ.24
ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಕಳೆದ ಜೂನ್ 15 ರಿಂದ ತರಗತಿಗಳು ಪ್ರಾರಂಭವಾಗಿದ್ದರೂ ಇಂಗ್ಲಿಷ್ ವಿಷಯ ಬೋಧನೆಗೆ ಉಪನ್ಯಾಸಕರಿಲ್ಲದೆ ಪಾಠ ಪ್ರವಚನಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಶನಿವಾರ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ 1317ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತರಗತಿಗಳು ಪ್ರಾರಂಭವಾಗಿ ಎರಡೂವರೆ ತಿಂಗಳು ಕಳೆದರೂ ಇಂಗ್ಲೀಷ್ ವಿಷಯವನ್ನು ಬೋಧಿಸಲು ಉಪನ್ಯಾಸಕರ ಕೊರತೆಯಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಪ್ರಸ್ತುತ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯಕ್ಕೆ ಒಬ್ಬರು ಕಾಯಂ ಉಪನ್ಯಾಸಕರು ಹಾಗೂ ಮತ್ತೊಬ್ಬರು ಅತಿಥಿ ಉಪನ್ಯಾಸಕರು ಮಾತ್ರ ಇದ್ದಾರೆ. ಬಹುತೇಕರಿಗೆ ಇಂಗ್ಲೀಷ್ ಕಷ್ಟದ ವಿಷಯವಾಗಿದ್ದು, ಈ ವಿಷಯದಲ್ಲಿಯೇ ಸೂಕ್ತ ಉಪನ್ಯಾಸಕರಿಲ್ಲದೆ ಮುಂದಿನ ವಾರದಲ್ಲಿ ನಡೆಯುವ ತರಗತಿ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡರು.
ಇಂಗ್ಲಿಷ್ ವಿಷಯದಲ್ಲಿ ತರಗತಿಗಳೇ ನಡೆದಿರುವುದಿಲ್ಲ. ಪ್ರಶ್ನೆಗಳಿಗೆ ಉತ್ತರಿಸುವುದಾದರೂ ಹೇಗೆ ಎಂದು ವಿದ್ಯಾರ್ಥ್ಥಿನಿಯರು ಆತಂಕ ವ್ಯಕ್ತಪಡಿಸಿದರಲ್ಲದೆ ಸಮಸ್ಯೆಯನ್ನು ಪ್ರಾಂಶುಪಾಲರ ಗಮನಕ್ಕೆ ಹಲವು ಬಾರಿ ತಂದಿದ್ದರೂ ಪ್ರಯೋಜನವಾಗಿಲ್ಲ, ಬದಲಿಗೆ ಇಷ್ಟವಿದ್ದರೆ ಇರಿ ಇಲ್ಲವೇ ವರ್ಗಾವಣೆ ಪತ್ರ ಕೊಡುತ್ತೇವೆ ತೆಗೆದುಕೊಂಡು ಹೋಗಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆಂದು ಆರೋಪಿಸಿದರು.
ಕಾಲೇಜಿನಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿನಿಯರು ಬಡ, ದಲಿತ, ಕೂಲಿ ಕಾರ್ಮಿಕರ, ರೈತರ ಹಾಗೂ ತಳ ಸಮುದಾಯಗಳಿಂದ ಬಂದರವರಾಗಿದ್ದು, ಹಲವು ಸಮಸ್ಯೆಗಳ ನಡುವೆ ವ್ಯಾಸಂಗ ಮಾಡುವಂತಾಗಿದೆ. ಹೆಣ್ಣು ಮಕ್ಕಳಿಗೆ ಸರ್ಕಾರ ಮತ್ತು ಇಲಾಖೆಗಳೂ ಉಪನ್ಯಾಸಕರು ಹಾಗೂ ಕನಿಷ್ಠ ಕುಡಿಯುವ ನೀರು, ಸೂಕ್ತ ಶೌಚಾಲಯ, ಗ್ರಂಥಾಲಯ ದಂತಹ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿವೆ ಹಾಗೂ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಕಾಂಪೌಂಡ್ ವ್ಯವಸ್ಥೆಯಿಲ್ಲದೆ ಭದ್ರತೆ ಕೊರತೆಯಿಂದ ತೊಂದರೆ ಎದುರಿಸುತ್ತಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ವಿದ್ಯಾರ್ಥಿನಿಯರಿಂದ ಲಕ್ಷಾಂತರ ರು.ಗಳನ್ನು ಸಂಗ್ರಹಿಸಿಯು ಸಹ ಕಾಲೇಜಿನ ಸಮಸ್ಯೆಗಳತ್ತ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕಾಲೇಜಿನಲ್ಲಿರುವ ಇಂಗ್ಲೀಷ್ ಉಪನ್ಯಾಸಕರ ಹಾಗೂ ಇತರೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಇಲ್ಲವಾದರೆ ತೀವ್ರ ರೀತಿಯ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರ ಸಂಬಂಧಪಟ್ಟ ಇಲಾಖೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗೆ ಎಚ್ಚರಿಕೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್.ಎಫ್.ಐ ಮುಖಂಡರು ಖಂಡಿಸಿ, ಆರೋಪಿಗಳನ್ನು ಈ ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಎಫ್.ಐ ಜಿಲ್ಲಾಧ್ಯಕ್ಷ ವಿ. ಅಂಬರೀಶ್, ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ,ಜಿಲ್ಲಾ ಸಹಕಾರ್ಯದರ್ಶಿ ಸಿ. ಅಮರೇಶ್, ನಗರ ಸಂಚಾಲಕ ಮುಸ್ತಾಫ್ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದರು.