ಉಪ ಚುನಾವಣೆ ಗೆಲವು: ವಿಜಯೋತ್ಸವ
ಕ.ಪ್ರ.ವಾರ್ತೆ ಕೋಲಾರ ಆ. 24
ಜಾತ್ಯತೀತ ತತ್ವಗಳನ್ನು ಗಾಳಿ ತೂರಿ ಕೋಮುವಾದಿ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡು ಚುನಾವಣೆ ಎದುರಿಸಿದ ಜೆಡಿಎಸ್‌ಗೆ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರು ತಕ್ಕಪಾಠ ಕಲಿಸಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು.
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದ ಹಿನ್ನಲೆಯಲ್ಲಿ ನಗರದ ಕಾಂಗ್ರೆಸ್ ಭವನದ ಬಳಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ, ಕಾರ್ಯಕರ್ತರಿಗೆ ಸಿಹಿ ಹಂಚಿಕೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್‌ಗೆ ದೊರೆತ ಜಯದಿಂದ ರಾಜ್ಯದ ಜನತೆಗೆ ಸ್ಪಷ್ಟವಾದ ಸಂದೇಶ ರವಾನೆಯಾಗಿದೆ. ಜೆಡಿಎಸ್ ನಾಯಕರು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಬಿಜೆಪಿ, ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡರೂ ಮತದಾರರು ಕಳೆದ ಮೂರು ತಿಂಗಳಲ್ಲಿ ಆಗಿರುವ ರಾಜ್ಯದ ಅಭಿವೃದ್ಧಿ ಗಮನಿಸಿ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇನ್ನಷ್ಟು ಬಲ ತುಂಬಿದ್ದಾರೆಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಸೇರಿದಂತೆ ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷಕ್ಕೆ ಜಯ ತಂದುಕೊಟ್ಟಿದ್ದಾರೆ, 2014ರ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಬಾಬು, ಜೆ.ಕೆ. ಜಯರಾಂ, ಮುಕ್ಕಡ್ ವೆಂಕಟೇಶ್, ಕುಮಾರ್, ಜಯದೇವ್, ಅಶ್ವತ್ಥನಾರಾಯಣ, ಸಂಜಯ್ ಜಾದವ್, ರಾಜೇಶ್‌ಸಿಂಗ್, ಗೋಪಾಲಗೌಡ,ಬೆಳಗಾನಹಳ್ಳಿ ಮುನಿವೆಂಕಟಪ್ಪ, ಆಂಜನಪ್ಪ,ಇಕ್ಬಾಲ್, ಜಫ್ರುಲ್ಲಾ, ಅಬ್ದೂಲ್ ಖಯ್ಯೂಂ, ಲಾಲ್ ಬಹುದ್ದೂರ್ ಶಾಸ್ತ್ರಿ, ನಗರಸಭೆ ಸದಸ್ಯ ರಮೇಶ್ ಸೇರಿದಂತೆ ಅನೇಕರ ಮುಖಂಡರು ಇದ್ದರು.
ಟೇಕಲ್‌ನಲ್ಲಿ ಸಂಭ್ರಮ
ಟೇಕಲ್: ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಇತರೆ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಟಿ.ಎಂ. ಅಶೋಕ್‌ಕುಮಾರ್, ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಜಿ.ಪಂ. ಸದಸ್ಯ ಆರ್. ರಾಜಣ್ಣ, ಮಾಸ್ತಿ ವಿಭಾಗದ ಕಾರ್ಯದರ್ಶಿ ಕೆ.ಜಿ.ಹಳ್ಳಿಯ ಎಸ್.ಆರ್. ಯಲ್ಲಪ್ಪ ಮುಂತಾದವರು ಅಭಿನಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಿಹಿ ಹಂಚಲಾಯಿತು.
ಕೊಂಡಶೆಟ್ಟಹಳ್ಳಿಯಲ್ಲಿ...
ಟೇಕಲ್: ಮಂಡ್ಯ ಲೋಕಾಸಭಾ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಮ್ಯಾ ಗೆಲುವಿಗೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಶಿವಕುಮಾರ್ ಸಹೋದರನ ಗೆಲುವಿಗೆ ಟೇಕಲ್‌ನ ಕೊಂಡಶೆಟ್ಟಹಳ್ಳಿ ಗ್ರಾಮದಲ್ಲಿ ಸಿಹಿ ಮತ್ತು ಪಟಾಕಿಗಳನ್ನು ಹಚ್ಚಿ ತಮ್ಮ ಸಂಭ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು ಹಂಚಿಕೊಂಡರು. ಕಾಂಗ್ರೆಸ್ ಮುಖಂಡ ಸಾದತ್ ಉಲ್ಲಾ ಖಾನ್, ಸಾಧಿಕ್‌ಪಾಷ, ಗ್ರಾ.ಪಂ. ಉಪಾಧ್ಯಕ್ಷ ಎ.ಸಿ. ಶ್ರೀನಿವಾಸ್, ಚಂಬೆ ವೆಂಕಟಸ್ವಾಮಿ, ಬೈರತ್ನಹಳ್ಳಿ ಮುನಿರಾಜು, ಅಗರದ ಪ್ರಕಾಶ್ ಉಪಸ್ಥಿತರಿದ್ದರು.