ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಛಾಯಾಗ್ರಾಹಕಿ ಮೇಲೆ ಗ್ಯಾಂಗ್‌ರೇಪ್ ಖಂಡಿಸಿ ಪ್ರತಿಭಟನೆ

Srinivasa Murthy VN
Updated On : 25 Aug 2013, 12:33 pm

ಕೋಲಾರ: ಕೆಲಸ ನಿಮಿತ್ತ ಮುಂಬೈ ನಗರದ ಶಕ್ತಿ ಮಿಲ್ ಪ್ರದೇಶದಲ್ಲಿ ಫೋಟೋಗಳನ್ನು ತೆಗೆಯಲು ಹೋಗಿದ್ದ ಪತ್ರಿಕಾ ಛಾಯಾಗ್ರಾಹಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದನ್ನು ಖಂಡಿಸಿ ಕೋಲಾರ ನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಛಾಯಾಗ್ರಾಹಕರ ಸಂಘದಿಂದ ಶನಿವಾರ ಮೌನ ಪ್ರತಿಭಟನೆ ನಡೆಯಿತು.
ನಗರದ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಪತ್ರಕರ್ತರು ಮತ್ತು ಛಾಯಾಗ್ರಾಹಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರಲ್ಲದೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮುಂಬೈ ಸರ್ಕಾರನ್ನು ಒತ್ತಾಯಿಸಿದರು.
ದೃಶ್ಯ ಮಾಧ್ಯಮದ ವರದಿಗಾರ ಶ್ರೀನಿವಾಸಮೂರ್ತಿ ಮಾತನಾಡಿ, ಮಹಿಳೆಯರ ಮೇಲೆ ಇತ್ತೀಚೆಗೆ ಅತ್ಯಾಚಾರ ಹೆಚ್ಚಾಗುತ್ತಿದೆ, ಪತ್ರಿಕಾ ರಂಗದಲ್ಲಿ ದಿಟ್ಟತನದಿಂದ ಕೆಲಸ ಮಾಡುವ ಮಹಿಳೆಯ ಮೇಲೆ ಪುಂಡರು ಅತ್ಯಾಚಾರ ಎಸಗಿರುವುದು ಖಂಡನೀಯ, ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆ ವಿಧಿಸಿ ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಕರ್ತ ಕೆ.ನರಸಿಂಹ ಮೂರ್ತಿ, ಮಹಿಳೆಯರು ಮಾಧ್ಯಮ ರಂಗಕ್ಕೆ ಬರುತ್ತಿರುವುದು ತುಂಬಾ ಕಡಿಮೆ, ದಿಟ್ಟ ತನದಿಂದ ತನ್ನ ಕೆಲಸ ನಿರ್ವಹಿಸಲು ಹೋಗಿದ್ದ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರವನ್ನು ಇಡೀ ದೇಶ ಖಂಡಿಸಬೇಕೆಂದು ತಿಳಿಸಿದರು.
ಆಂಗ್ಲ ಪತ್ರಿಕೆಯ ವರದಿಗಾರ ವಿಶ್ವ ಕುಂದಾಪುರ, ದೆಹಲಿಯಲ್ಲಿ ನಡೆದ ನಿರ್ಭಯಳ ಮೇಲಿನ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಅನೇಕ ಪ್ರಕರಣಗಳು ವರದಿಯಾಗುತ್ತಿದೆ. ವಾಣಿಜ್ಯ ನಗರಿಯಾದ ಮುಂಬೈನಲ್ಲಿ ಈ ರೀತಿಯ ಘಟನೆ ನಡೆದಿರುವುದು ಆತಂಕ ಉಂಟು ಮಾಡಿದೆ ಎಂದರು.
ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್, ಸರ್ಕಾರಗಳು ಕಾನೂನನ್ನು ಬಿಗಿ ಮಾಡಬೇಕು, ಆರೋಪಿಗಳನ್ನು ಜೈಲಿನಿಂದ ಹೊರಬರದಂತೆ ನೋಡಿಕೊಳ್ಳುವ ಮೂಲಕ ಇತರರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡುವಂತೆ ಒತ್ತಾಯಿಸಿದರು.
ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿ. ಕೃಷ್ಣ ಘಟನೆ ಖಂಡಿಸಿ, ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು. ಮೌನ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ವಹಿಸಿದ್ದರು.
ಪದಾಧಿಕಾರಿಗಳಾದ ವಾಸುದೇವಹೊಳ್ಳ, ಸುರೇಶ್‌ಕುಮಾರ್, ಅಂತಗಂಗೆ ಚಂದ್ರಶೇಖರ್, ವಿಕೆ ಹರೀಶ್, ಸ್ಪಂದನ ರಂಗನಾಥ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement