ದಸರಾ ರಜೆಯಲ್ಲೂ ವಿಶೇಷ ತರಗತಿ ನಡೆಸಿ
ಕ.ಪ್ರ.ವಾರ್ತೆ ಕೋಲಾರ ಆ. 24
ಗುಣಮಟ್ಟದ ಫಲಿತಾಂಶಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲು ಇಲಾಖೆ ಹೊರ ತಂದಿರುವ ಅನನ್ಯ ಸ್ಫೂರ್ತಿ ಮಾರ್ಗದರ್ಶಿಯನ್ನು ಸೆಪ್ಟಂಬರ್ ಮೊದಲ ವಾರ ಬಿಡುಗಡೆ ಮಾಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ. ಪದ್ಮನಾಭ್ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕೋಲಾರ ಮತ್ತು ಮಾಲೂರು ತಾಲೂಕುಗಳ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅನನ್ಯ ಸ್ಫೂರ್ತಿ ಮಾರ್ಗದರ್ಶಿ ಮುದ್ರಣ ಹಂತದಲ್ಲಿದ್ದು, ರಂಗಮಂದಿರದಲ್ಲಿ ನಡೆಯುವ ಮುಖ್ಯ ಶಿಕ್ಷಕರ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಂದ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ಕಳೆದ ಬಾರಿ ಇಲಾಖೆ ಹೊರ ತಂದಿದ್ದ ಸ್ಫೂರ್ತಿ ಸೌರಭ ಮಾರ್ಗದರ್ಶಿಯಡಿ ಜಿಲ್ಲೆಯ ಶಿಕ್ಷಕರು, ಅಧಿಕಾರಿಗಳು ಕಾರ್ಯನಿರ್ವಹಿಸಿದ್ದರಿಂದಾಗಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 4ನೇ ಸ್ಥಾನದ ಗೌರವ ಪಡೆಯಲು ಸಾಧ್ಯವಾಯಿತು ಎಂದರು.
ದಸರಾ ರಜೆಯಲ್ಲೂ ತರಗತಿ ನಡೆಸಿ: ಜಿಲ್ಲೆಯಲ್ಲಿ ಈ ವರ್ಷವೂ ಗುಣಾತ್ಮಕ ಫಲಿತಾಂಶದಲ್ಲಿ ಸಾಧನೆ ಮುಂದುವರೆಸಲು ಹೆಚ್ಚುವರಿ ತರಗತಿ ನಡೆಸಿ, ದಸರಾ ರಜೆಯಲ್ಲೂ 10ನೇ ತರಗತಿಗೆ ವಿಶೇಷ ತರಗತಿ ನಡೆಸಿ, ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಸೂಚಿಸಿ ವಿಶೇಷ ತರಗತಿ ನಡೆಸಲು ಸಮ್ಮತಿಸದ ಶಿಕ್ಷಕರ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ದೂರು ನೀಡಿ ನನ್ನ ಗಮನಕ್ಕೆ ತನ್ನಿ ಎಂದರು.
ಬಿಹಾರದಲ್ಲಿ ಬಿಸಿಯೂಟದ ಅವಾಂತರ ಸ್ಮರಿಸಿದ ಡಿಡಿಪಿಐ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ, ಶುಚಿತ್ವಕ್ಕೆ ಆದ್ಯತೆ ನೀಡಿ, ಅಡುಗೆ ಸಿಬ್ಬಂದಿ ಕಾರ್ಯದ ಕುರಿತು ಮುಖ್ಯ ಶಿಕ್ಷಕರು ಗಮನ ಹರಿಸುತ್ತೀರಿ, ಗುಣಮಟ್ಟದ ಆಹಾರ ಸಾಮಗ್ರಿ ಬಾರದಿದ್ದರೆ ಕೂಡಲೇ ದೂರು ನೀಡಿ ಎಂದರು.
ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಸರ್ಕಾರಿ, ಅನುದಾನಿತ ಶಾಲೆಗಳ ಅಡುಗೆ ಕೋಣೆಗಳನ್ನು ಶೀಘ್ರ ಮುಗಿಸುವಂತೆ ಅವರು ಸೂಚಿಸಿ, ಬಿಇಒ ಅವರು ಭೇಟಿ ನೀಡಿ ಪ್ರಗತಿಯ ವರದಿ ನೀಡುವಂತೆ ತಿಳಿಸಿದರು.
ಕ್ಷೀರಭಾಗ್ಯ ಸಮರ್ಪಕ ಅನುಷ್ಠಾನ, ಕಟ್ಟಡ, ಪೀಠೋಪಕರಣ, ಕಾಂಪೌಂಡ್ಗೆ ಬಿಡುಗಡೆಯಾಗಿರುವ ಅನುದಾನದ ಸದ್ಬಳಕೆ, ತಂಬಾಕು ನಿಷೇಧ ಮತ್ತಿತರ ಅಂಶಗಳ ಕುರಿತು ಮುಖ್ಯ ಶಿಕ್ಷಕರು ಗಮನಹರಿಸಬೇಕೆಂದರು. ಎಸ್ಎಸ್ಎಲ್ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್, ಮುಖ್ಯ ಶಿಕ್ಷಕರ ಕಾರ್ಯಗಳನ್ನು ವಿವರಿಸಿ, ಅಧಿಕಾರ ವಿಕೇಂದ್ರೀಕರಣ ಮಾಡಿ, ಕೆಲಸ ಹಂಚಿಕೆ ಮಾಡಿ, ನೀವು ನಿರಂತರ ಮೌಲ್ಯಮಾಪನ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕೆಂದರು.
ಮುಖ್ಯ ಶಿಕ್ಷಕರು ತರಗತಿ ತೆಗೆದುಕೊಳ್ಳಿ, ಸಹ ಶಿಕ್ಷಕರ ತರಗತಿಯನ್ನು ತಿಂಗಳಿಗೆ ಎರಡು ಅವಧಿಯಾದರೂ ವೀಕ್ಷಿಸಿ ಎಂದು ಸೂಚಿಸಿ, ಕಲಿಕೋಪಕರಣ ಬಳಕೆ, ಪ್ರಯೋಗಾಲಯ ಉಪಕರಣ ಸದ್ಬಳಕೆಗೆ ಹೆಚ್ಚಿನ ಗಮನ ನೀಡಬೇಕೆಂದರು.
ಅಧ್ಯಾಯವಾರು ಪ್ರಶ್ನೆ ಪತ್ರಿಕೆ: ಇಲಾಖೆ ವತಿಯಿಂದ ಅಧ್ಯಾಯವಾರು ಪ್ರಶ್ನೆ ಪತ್ರಿಕೆ ತಯಾರಿಸಿ ನೀಡಲಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿ ಮಕ್ಕಳ ಗುಂಪು ಅಧ್ಯಯನಕ್ಕೆ ಒತ್ತು ನೀಡಿ ಎಂದರು.
ಕಳೆದ ಬಾರಿ ಶೇ.80ರಿಂದ ಶೇ.99 ರ ನಡುವೆ ಫಲಿತಾಂಶ ಗಳಿಸಿದ 151 ಶಾಲೆಗಳು ಜಿಲ್ಲೆಯಲ್ಲಿವೆ ಎಂದ ಅವರು, ಇವರು ಈ ಬಾರಿ ಶೇ.100 ಸಾಧನೆಗಾಗಿ ಶ್ರಮಿಸಬೇಕು, ವಾರ್ಷಿಕ ಕ್ರಿಯಾ ಯೋಜನೆ ಹಮ್ಮಿಕೊಳ್ಳಬೇಕು, ವೈಯುಕ್ತಿಕ, ಕ್ರೋಢೀಕೃತ ಅಂಕಗಳ ವಹಿ, ಕಡತಗಳನ್ನು ನಿರ್ವಹಿಸಬೇಕೆಂದರು.
ವಿಜ್ಞಾನ, ಗಣಿತ ಶಿಕ್ಷಕರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು, ಕಳೆದ 2012 ರಲ್ಲಿ ವಿಜ್ಞಾನದಲ್ಲಿ ಶೇ.1.6 ಫಲಿತಾಂಶ ಕಡಿಮೆಯಾದ್ದರಿಂದಾಗಿ ನಾವು 8ನೇ ಸ್ಥಾನದಿಂದ 21ನೇ ಸ್ಥಾನಕ್ಕೆ ಕುಸಿಯಬೇಕಾಯಿತು ಎಂದರು.
ವಿಷಯ ಪರೀಕ್ಷಕ ಸಿ.ಆರ್. ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಲಿಂಗಯ್ಯ, ಸುಬ್ರಹ್ಮಣ್ಯಂ, ವಿಷಯ ಪರೀಕ್ಷಕರಾದ ವೆಂಕಟಸ್ವಾಮಿ, ರಾಜಣ್ಣ, ಶಿವಮಾದಯ್ಯ, ಮಲ್ಲಿಕಾರ್ಜುನಾಚಾರಿ, ಉಪ ಪ್ರಾಂಶುಪಾಲರಾದ ರುದ್ರಪ್ಪ, ಗೋವಿಂದಪ್ಪ, ಬಿಇಒ ಕಚೇರಿಯ ರಾಮಚಂದ್ರಾರೆಡ್ಡಿ, ನಾರಾಯಣರೆಡ್ಡಿ ಮತ್ತಿತರರು ಇದ್ದರು. ಉಪಪ್ರಾಂಶುಪಾಲ ರುದ್ರಪ್ಪ ನಿರೂಪಿಸಿ, ಗೋವಿಂದಪ್ಪ ಸ್ವಾಗತಿಸಿದರು.