ದ್ರೌಪದಿ ಜಯಂತಿ ಮಹೋತ್ಸವ
ಮಾಲೂರು: ಪಟ್ಟಣದ ಧರ್ಮರಾಯ ದೇವಾಲಯದಲ್ಲಿ ವಹ್ನಿ ಕುಲ ಕ್ಷತ್ರೀಯ ಸಂಘ ಹಾಗೂ ವಹ್ನಿ ಯುವ ಜಾಗೃತಿ ಸಂಘ ಶುಕ್ರವಾರ ಏರ್ಪಡಿಸಿದ್ದ ದ್ರೌಪದಿ ಜಯಂತಿ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು.
ಬೆಳಗ್ಗೆ ದ್ರೌಪದಿದೇವಿಗೆ ಅಭಿಷೇಕದ ನಂತರ ಸುಂದರ ಹೂವಿನ ಮಂಟಪದಲ್ಲಿರಿಸಿ ಪೂಜೆ ಸಲ್ಲಿಸಲಾಯಿತು. ತಾಲೂಕಿನ ಗುಡಿ ಕಟ್ಟಿನ ಹಲವು ಗ್ರಾಮಗಳಿಂದ ಸುಮಂಗಲಿಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಪೂಜೆ ಸಲ್ಲಿಸಿದರು. ದೇವಿಗೆ ಫಲ-ತಂಬೂಲಗಳಿಂದ ಮಡಿಲು ತುಂಬಿಸಿದರು. ದೇವಾಲಯಕ್ಕೆ ಭೇಟಿ ನೀಡಿದ ಎಲ್ಲ ಭಕ್ತಾದಿಗಳಿಗೆ ದ್ರೌಪದಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದವರು ಅರಿಶಿನ-ಕುಂಕುಮ ಹಾಗೂ ಮಂಗಳ ದ್ರವ್ಯಗಳನ್ನು ವಿತರಿಸಿದರು.
ದೇವಾಲಯದ ಮುಂಭಾಗ ರಾಜು ನೃತ್ಯ ತಂಡ ಹಾಗೂ ಕಿರುತರೆ ಕಲಾವಿದರ ತಂಡ ಮೆಲೋಡಿಸ್ ಲಿಟಲ್ ಚಾಂಪ್ಸ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಸಕ ಮಂಜುನಾಥ್ ಗೌಡ ಅವರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.ದೇವಾಲಯ ಸಮಿತಿ ಅಧ್ಯಕ್ಷ ಎಂ.ಪಿ. ವಿಜಯಕುಮಾರ್, ಪಿ. ವೆಂಕಟೇಶ್, ಎಂ.ಸಿ. ಮುನಿರಾಜು, ಕೆ.ಸಿ. ಸೂರಪ್ಪ, ಎಂ.ಸಿ. ರವಿ, ಎಂ.ಬಿ. ವೆಂಕಟೇಶ್,ಪಿ.ಸಿ. ರಾಜಶೇಖರ್, ಎಂ.ಎಂ. ಮಂಜುನಾಥ್, ಪಿ. ರಮೇಶ್, ಎಂ.ಪಿ. ಆಂಜಿ, ಎ.ಪಿ. ಚಂದ್ರಶೇಖರ್,ನಾಗೇಶ್, ಎಂ. ಗೋಪಿ, ಆಂಜಿನಪ್ಪ, ಸಂತೋಷ್, ಲೋಕೇಶ್, ರಾಜು, ನಾಗರಾಜು, ಚೆನ್ನರಾಯ, ಹರೀಶ್, ಸಂದಪ್ಪ, ಕುಮಾರ್ ಇದ್ದರು.
ವರ್ತೂರ್ ಬಣಕ್ಕೆ ಸೇರ್ಪಡೆ
ಕೋಲಾರ: ತಾಲೂಕಿನ ಕ್ಯಾಲನೂರು ಗ್ರಾಮದ ಮುಖಂಡರಾದ ಎನ್. ರಾಮಾಂಜಿನಪ್ಪ ಮತ್ತು ವೆಂಕಟರೆಡ್ಡಿ ಅವರು ಜೆಡಿಎಸ್ ತೊರೆದು ಶಾಸಕ ವರ್ತೂರ್ ಪ್ರಕಾಶ್ ಬಣಕ್ಕೆ ಸೇರಿದರು. ಜೆಡಿಎಸ್ ಮುಖಂಡರನ್ನು ತಮ್ಮ ಬಣಕ್ಕೆ ಸೇರಿಸಿಕೊಂಡು ಮಾತನಾಡಿದ ಶಾಸಕ ವರ್ತೂರ್ ಪ್ರಕಾಶ್, ಚುನಾವಣೆ ಮುಗಿದ ನಂತರವೂ ಅನೇಕ ಮುಖಂಡರು ತಮ್ಮ ಜೊತೆ ಗುರುತಿಸಿಕೊಳ್ಳುತ್ತಿರುವುದಕ್ಕೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಕಾರಣವೆಂದು ಹೇಳಿದರು. ಮುನ್ನಾಸಾಬ್, ಚಾನ್, ನರಸಿಂಹಮೂರ್ತಿ, ಗ್ರಾಪಂ ಅಧ್ಯಕ್ಷ ನಜೀರ್‌ಖಾನ್, ಎನ್.ರಮೇಶ್, ತಿಪ್ಪೇನಹಳ್ಳಿ ಕೃಷ್ಣಪ್ಪ, ಚಾಂದ್ ಪಾಷ, ಆಸೀಪುಲ್ಲಾ, ನಸೀರ್ ಖಾನ್, ಅಬ್ದುಲ್ ಬಷೀರ್ ಮತ್ತಿತರರು ಇದ್ದರು.
ಖಾಸಗಿ ಬಸ್ ಪಲ್ಟಿ: 20 ಮಂದಿಗೆ ಗಾಯ
ದೊಡ್ಡಬಳ್ಳಾಪುರ: ತಾಲೂಕಿನ ಕಾಡನೂರು ಬಳಿಯ ಮಾದಗೊಂಡನಹಳ್ಳಿ ಸಮೀಪ ಖಾಸಗಿ ಬಸ್‌ವೊಂದು ಉರುಳಿಬಿದ್ದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವರ ಪೈಕಿ 4 ವರ್ಷದ ಬಾಲಕಿಯ ಕಾಲು ಮುರಿದಿದ್ದು, ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ರಾಜಘಟ್ಟದ ಶ್ರೀನಿವಾಸ್ ಪುತ್ರಿ ನಮಿತಶ್ರೀ(4), ವಡ್ಡರಹಳ್ಳಿ ಗ್ರಾಮದ ನೀಲಮ್ಮ(50), ಮುನಿರಾಜಪ್ಪ(51), ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮದ ಉಷಾ(21), ಮಂಜುನಾಥ್(25), ರತ್ನಮ್ಮ(42), ವಿಜಯಲಕ್ಷ್ಮೀ (40), ದೇವನಹಳ್ಳಿ ಪಟ್ಟಣದ ಅಕ್ಕಮ್ಮ(40), ಮಹೇಶ್(21), ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಸುನಂದಮ್ಮ(30), ಕೃಷ್ಣಪ್ಪ(45), ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನ್‌ಪೇಟೆಯ ಶ್ರೀನಿವಾಸ್(40) ಎಂದು ಗುರುತಿಸಲಾಗಿದೆ. ಇವರ ಪೈಕಿ ನಮಿತಶ್ರೀ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು ಮಾಹಿತಿ ಲಭ್ಯವಾಗಿಲ್ಲ. ಬಸ್ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ನಡುವೆ ಮಧುರೆ ಮಾರ್ಗವಾಗಿ ಸಂಚರಿಸುತ್ತಿತ್ತು. ಮಧುರೈ ಯಿಂದ ಹೊರಟಿದ್ದ ಬಸ್ ಮಲ್ಲೋಹಳ್ಳಿ, ಕಾಡನೂರು ಮೂಲಕ ದೊಡ್ಡಬಳ್ಳಾಪುರದ ಕಡೆ ಬರುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ಶ್ರಾವಣ ಶನಿವಾರ ಪ್ರಯುಕ್ತ ಕನಸವಾಡಿಯ ಚಿಕ್ಕಮಧುರೆ ಶನೈಶ್ಚರ ಸ್ವಾಮಿ ದೇವಾಲಯಕ್ಕೆ ಬಂದಿದ್ದ 50ಕ್ಕೂ ಹೆಚ್ಚು ಭಕ್ತರು ಬಸ್ಸಿನಲ್ಲಿದ್ದರು. ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಮಧುರೆಯಿಂದ ಹೊರಟ ಬಸ್ ಮದಗೊಂಡನಹಳ್ಳಿ ಬಳಿ ಹದಗೆಟ್ಟಿರುವ ರಸ್ತೆಯಲ್ಲಿ ಲಾರಿಯೊಂದನ್ನು ಹಿಂದಿಕ್ಕಲು ಹೋಗಿ ರಸ್ತೆಯಲ್ಲಿನ ದೊಡ್ಡ ಹೊಂಡಕ್ಕಿಳಿದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಆದರೆ ಅದೃಷ್ಟವಶಾತ್ ಎಲ್ಲ ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಗಾರಪೇಟೆಯಲ್ಲಿ ಕಾಂಗ್ರೆಸ್ ವಿಜಯೋತ್ಸವ
ಬಂಗಾರಪೇಟೆ: ತೀವ್ರ ಕುತೂಹಲ ಕೆರಳಿಸಿದ್ದ ಎರಡು ಲೋಕಸಭೆ ಸ್ಥಾನಗಳ ಉಪ ಚುನಾವಣೆ ಫಲಿತಾಂಶ ಎರಡೂ ಕ್ಷೇತ್ರಗಳಲ್ಲಿಯೂ ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ವಿರೋಧಿ ಪಕ್ಷಗಳಿಗೆ ಮುಖಭಂಗ ಉಂಟು ಮಾಡಿರುವುದನ್ನು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ 21ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಜೆಡಿಎಸ್-ಬಿಜೆಪಿ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡರೂ ಮತದಾರರು ಈ ಅಪವಿತ್ರ ಮೈತ್ರಿಗೆ ಮಣ್ಣನೆ ನೀಡದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯ ಆಡಳಿತವನ್ನು ಮೆಚ್ಚಿ ಕೈಗೆ ಜೈ ಎಂದಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ ತಿಳಿಸಿದರು. ಅಲ್ಲಿ ಜೆಡಿಎಸ್ ಮತ್ತೊಮ್ಮೆ ಗೆಲ್ಲಿದೆ ಎಂದು ಅಂಬರೀಷ್ ವಿರುದ್ಧ ಲಘುವಾಗಿ ಮಾತನಾಡಿದ್ದ ಪರಾಜಿತ ಅಭ್ಯರ್ಥಿ ಪುಟ್ಟರಾಜು ಅಂಬರೀಷ್ ಅವರಿಗೆ ಜನಪ್ರಿಯತೆ ಕುಗ್ಗಿದೆಯೋ ಇಲ್ಲವೋ ಎಂಬುದನ್ನು ಇನ್ನಾದರೂ ಅರಿತು ಮಾತನಾಡಲಿ ಎಂದು ಸಲಹೆ ನೀಡಿದರು. ಕೆ. ಚಂದ್ರಾರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಪಟ್ಟರು. ಈ ವೇಳೆ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಪುರಸಭೆ ಸದಸ್ಯ ಶಪಿ, ಮುಖಂಡರಾದ ಡಿ.ಕಿಶೋರ್‌ಕುಮಾರ್, ವೆಂಕಟೇಶ್ ಮತ್ತಿತರರು ಇದ್ದರು.