ಪಿಡಿಒ ಮೇಲೆ ಹಲ್ಲೆ; ಧರಣಿ
ಶ್ರೀನಿವಾಸಪುರ: ತಾಲೂಕಿನ ಕೂರಿಗೇಪಲ್ಲಿ ಪಂಚಾಯ್ತಿಯ ಪ್ರಭಾರ ಅಭಿವೃದ್ಧಿ ಅಧಿಕಾರಿಯೊಬ್ಬರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಮತ್ತು ಆರೋಪಿಗಳಿಬ್ಬರನ್ನು ಬಂಧಿಸುವಂತೆ ಒತ್ತಾಯಿಸಿ ತಾಲೂಕಿನ ಗ್ರಾಮ ಪಂಚಾಯ್ತಿಗಳ ನೌಕರರು ತಾಪಂ ಮುಂದೆ ಧರಣಿ ನಡೆಸಿದರು. ಮುಳಬಾಗಿಲು ತಾಲೂಕಿನ ಅಪ್ಪೇನಹಳ್ಳಿ ಗ್ರಾಮದ ಕಾರ್ಯದರ್ಶಿ ಸಿ. ಸುಬ್ರಮಣಿ ಎಂಬುವವರು ಸುಮಾರು 2 ವರ್ಷಗಳಿಂದ ಶ್ರೀನಿವಾಸಪುರ ತಾಲೂಕಿನ ಕೂರಿಗೇಪಲ್ಲಿ ಪಂಚಾಯ್ತಿಯಲ್ಲಿ ಪ್ರಭಾರ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಯಲ್ಪಾಡು ಪೊಲೀಸರು ಆರೋಪಿಗಳನ್ನು ಬಂಧಿಸದೆ ಸಬ್ ಇನ್ಸ್ಪೆಕ್ಟರ್ ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆಂದು ಆರೋಪಿಸಿ, ಶೀಘ್ರವೇ ಬಂಧಿಸಬೇಕೆಂದು ಒತ್ತಾಯಿಸಿದರು. ಪಿ. ವಿಶ್ವನಾಥರೆಡ್ಡಿ, ಕೃಷ್ಣ ಆರ್.ಎನ್., ಸುರೇಶ್, ಅಧ್ಯಕ್ಷ ಎಂ. ನಾಗರಾಜ್ ಇದ್ದರು.
ಗೌರಿಬಿದನೂರು ಘಟಕಕ್ಕೆ ದಿನಕ್ಕೆ 70 ಸಾವಿರ ನಷ್ಟ
ಗೌರಿಬಿದನೂರು: ಆಂಧ್ರಪ್ರದೇಶದಲ್ಲಿ ಕಳೆದ 18 ದಿನಗಳಿಂದ ನಡೆಯುತ್ತಿರುವ ಮುಷ್ಕರದಿಂದ ಗೌರಿಬಿದನೂರು ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕಕ್ಕೆ ಪ್ರತಿದಿನ 60ರಿಂದ 70 ಸಾವಿರ ನಷ್ಟ ಉಂಟಾಗುತ್ತಿದೆ ಎಂದು ತಿಳಿದು ಬಂದಿದೆ. ಗೌರಿಬಿದನೂರು ಹಿಂದೂಪುರ, ಅನಂತಪುರ, ತಿರುಪತಿ ಮುಂತಾದ ಆಂಧ್ರದ ಊರುಗಳಿಗೆ ನಿತ್ಯ 45 ಬಸ್ಗಳನ್ನು ಓಡಿಸಲಾಗುತ್ತಿತ್ತು. ಇದರಿಂದ ಅಂತರ ರಾಜ್ಯ ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಿತ್ತು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳು ಕರ್ನಾಟಕದ ಗಡಿವರೆಗೂ ಹೋಗುತ್ತಿದ್ದು, ಅಲ್ಲಿಂದ ಹಿಂದೂಪುರಕ್ಕೆ ಪ್ರಯಾಣಿಕರು ಆಟೋಗಳಲ್ಲಿ ಕದ್ದು ಮುಚ್ಚಿ ತೆರಳಬೇಕಾಗಿದೆ. ಈ ಆಟೋಗಳಲ್ಲಿ ಪ್ರತಿ ಪ್ರಯಾಣಿಕನಿಂದ 12 ಕಿ.ಮೀ. ದೂರಕ್ಕೆ 80ರಿಂದ 100ವರೆಗೆ ಸುಲಿಗೆ ಮಾಡಲಾಗುತ್ತಿದೆ. ಆಂಧ್ರದ ಮುಷ್ಕರದ ಬಿಸಿಯ ಶಾಖ ಗಡಿಯಲ್ಲಿನ ಕರ್ನಾಟಕದ ಪ್ರದೇಶಗಳಿಗೂ ತಾಕಿದೆ.
ಅಪಘಾತ; ವ್ಯಕ್ತಿ ಸಾವು
ಗೌರಿಬಿದನೂರು: ಎದುರುಗಡೆ ಬಂದ ವಾಹನದ ಪ್ರಖರ ಬೆಳಕಿಗೆ ಗಾಬರಿಗೊಂಡು ನಡೆದ ರಸ್ತೆ ಅವಘಡದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ ಘಟನೆ ಗುರುವಾರ ರಾತ್ರಿ ಸುಮಾರು 11.30 ಗಂಟೆ ಸಮಯದಲ್ಲಿ ಕಲ್ಲೂಡಿಯ ಆರ್ಟಿಒ ಚೆಕ್ಪೋಸ್ಟ್ ಬಳಿ ನಡೆದಿದೆ. ಮತ್ತೋರ್ವ ಗಾಯಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿದುರಾಶ್ವತ್ಥದಲ್ಲಿ ವಿವಾಹಕ್ಕೆ ಹಾಜರಾಗಿ ತಮ್ಮ ಊರಾದ ದೊಡ್ಡಬಳ್ಳಾಪುರದ ಸಮೀಪ ಹೆಸರಘಟ್ಟ ವಾಸಿಗಳಾದ ಕಾಳಾಚಾರಿ ಮಗನಾದ ಶ್ರೀನಿವಾಸಾಚಾರಿ(34) ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಸುನೀಲ್ ಗಾಯಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹೃದಯಾಘಾತದಿಂದ ಸಾವು
ಶಿಡ್ಲಘಟ್ಟ: ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯ ವೈ. ಹುಣೀಸೇಹಳ್ಳಿ ಗೇಟ್ ಬಳಿ ನಡೆದಿದೆ. ನರಸಪ್ಪ(65) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ನರಸಪ್ಪ ಚಿಕ್ಕದಾಸೇನಹಳ್ಳಿಯ ನಿವಾಸಿಯಾಗಿದ್ದು, ಗುರುವಾರ ಸಂಜೆ ವೈ. ಹುಣಿಸೇನಹಳ್ಳಿ ಗೇಟ್ ಬಳಿ ಬಂದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ
ಚಿಂತಾಮಣಿ: ಬುದ್ಧಿಮಾತು ಹೇಳಿದ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ಗೃಹಿಣಿಯೋರ್ವಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಪಟ್ಟಣದ ಮಾಳಪ್ಪಲ್ಲಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಪಟ್ಟಣದ ಮಾಳಪ್ಪಲ್ಲಿ ನಿವಾಸಿ ಬೈರಾರೆಡ್ಡಿ ಎಂಬಾತನು ಕಳೆದ ಹಲವು ತಿಂಗಳಿನಿಂದ ಕುಡಿತದ ಚಟಕ್ಕೆ ದಾಸನಾಗಿ ಸಂಸಾರ ನಡೆಸದೆ ಇರುವ ಬಗ್ಗೆ ಪತ್ನಿ ಕಲ್ಯಾಣಿ(28) ಎಂಬ ಗೃಹಿಣಿ ಕಳೆದ 2 ದಿನಗಳ ಹಿಂದೆ ಕುಡಿತ ಚಟದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ಗಂಡ ಸೀಮೆಎಣ್ಣೆ ಸುರಿದ ಪರಿಣಾಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.