ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಬಂಗಾರಪೇಟೆ ಲಂಚ ಮುಕ್ತ ಕ್ಷೇತ್ರ'

Srinivasa Murthy VN
Updated On : 25 Aug 2013, 12:33 pm

ಬಂಗಾರಪೇಟೆ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಹಾಗೂ ಕ್ಷೇತ್ರವನ್ನು ಲಂಚ ಮುಕ್ತ ಕ್ಷೇತ್ರವನ್ನಾಗಿ ಮಾಡುವ ಉದ್ದೇಶದಿಂದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕಳೆದ ಮೂರು ತಿಂಗಳಿಂದ ಹಲವು ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮುಂದುವರೆದಿದೆ.
ಹಳೇ ತಾಲೂಕು ಕಚೇರಿ ಆವರಣದಲ್ಲಿರುವ ಅಟಲ್ ಜನ ಸ್ನೇಹಿ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಇದ್ದ ನೆಮ್ಮದಿ ಕೇಂದ್ರದಲ್ಲಿ ಜನರಿಗೆ ನೆಮ್ಮದಿಯಿಲ್ಲದಂತಾಗಿತ್ತು ಅದನ್ನು ಬದಲಿಸಿ ಅಟಲ್‌ಜೀ  ಜನಸ್ನೇಹಿ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಇಲ್ಲಿಯೂ ಸಾರ್ವಜನಿಕರ ಯಾವುದೇ ಕೆಲಸಗಳು ತ್ವರಿತವಾಗಿ ಸಾಗದೆ ಇಲ್ಲಿನ ಸಿಬ್ಬಂದಿ ಜನರಿಂದ ಲಂಚಕ್ಕಾಗಿ ಪೀಡಿಸುವರು ಹಣ ಕೊಡದಿದ್ದರೆ ಯಾವುದೇ ಕೆಲಸವನ್ನು ಬೇಗನೆ ಮಾಡಿಕೊಡುವುದಿಲ್ಲ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಭೇಟಿ ಕೊಟ್ಟಾಗ ಸತ್ಯ ಬಯಲಿಗೆ ಬಂತು.
ಜಾತಿ ಪ್ರಮಾಣ ಪತ್ರ,ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ಪ್ರಮಾಣ ಪತ್ರಗಳು ಈ ಕೇಂದ್ರದಿಂದಲೇ ತಹಸೀಲ್ದಾರ್ ಕಚೇರಿಗೆ ಬರಬೇಕು ಆದರೆ ಇಲ್ಲಿಗೆ ವಿವಿಧ ಪ್ರಮಾಣಪತ್ರಗಳಿಗಾಗಿ ನೂರಾರು ಅರ್ಜಿಗಳು ಬಂದಿವೆ ಆದರೆ ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡದೆ ಲಂಚ ಕೊಟ್ಟವರ ಕೆಲಸ ಮಾತ್ರ ಬರದಿಂದ ಸಾಗಿದೆ ಉಳಿದವರ ಕೆಲಸ ಮಂದಗತಿಯಲ್ಲಿದ್ದು ಇದರಿಂದ ಕೆರಲಿದ ಶಾಸಕ ನಾರಾಯಣಸ್ವಾಮಿ ಸರ್ಕಾರ ನಿಮಗೆ ಸಂಬಳ ಕೊಡುತ್ತದೆ ಆ ಹಣಕ್ಕೆ ಕೆಲಸ ಮಾಡಿ ಜನರಿಂದ ಯಾಕೆ ಹಣ ಪೀಕುವಿರಿ ನಿಮಗೆ ಸ್ವಲ್ಪವಾದರು ಮಾನ ಮರ್ಯಾದೆ ಇಲ್ಲವೆ ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು ಯಾವ ಪ್ರಮಾಣ ಪತ್ರಕ್ಕಾಗಿ ಎಷ್ಚು ಅರ್ಜಿಗಳು ಬಂದಿವೆ ಎಂಬುದನ್ನು ಸಮರ್ಪಕವಾಗಿ ಕಡತಗಳನ್ನು ಇಡದಿರುವುದು ಬೆಳಕಿಗೆ ಬಂತು.
ನಂತರ ಶಾಸಕ ನಾರಾಯಣಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹಣವಿಲ್ಲದಿದ್ದರೆ ಯಾವುದೇ ಕೆಲಸಗಳು ಸಾಗುವುದಿಲ್ಲ ಇದರಿಂದ ಬಡವರಿಗೆ ಅನಾನುಕೂಲವಾಗಿದ್ದು ಇನ್ನು ಮುಂದೆ ಕಚೇರಿಗಳಲ್ಲಿ ಯಾರಾದರೂ ಲಂಚ ಕೇಳಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಿಗೆ ತಿಳಿಸಿದರಲ್ಲದೆ ಕ್ಷೇತ್ರವನ್ನು ಲಚ ಮುಕ್ತ ಕ್ಷೇತ್ರವಾಗಿ ರೂಪಿಸುವುದೇ ನನ್ನ ಗುರಿಯಾಗಿದೆ ಇದಕ್ಕೆ ಎಲ್ಲಾ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಇಲ್ಲದಿದ್ದರೆ ಕ್ಷೇತ್ರ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement