ಭದ್ರತಾಧಿಕಾರಿ ಆನಂದ್ಸಿಂಗ್ ಸೆರೆ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯ ಮೈಸೂರು ಮಿಲ್ನಲ್ಲಿ ಚಿನ್ನದ ಅದಿರು ಕಳವಿಗೆ ಸಹಕರಿಸಿದ ಬಿಜಿಎಂಎಲ್ನ ಹಿರಿಯ ಭದ್ರತಾಧಿಕಾರಿ (ಸಿಎಸ್ಒ) ಆನಂದ್ಸಿಂಗ್ ರಾವತ್ನನ್ನು ಮಾರಿಕುಪ್ಪಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆ.16ರಂದು ಶುಕ್ರವಾರ ಮಧ್ಯರಾತ್ರಿ ಬಿಜಿಎಂಎಲ್ನ ಮೈಸೂರು ಮಿಲ್ನೊಳಗೆ ಚಿನ್ನ ಮಿಶ್ರಿತ ಮಣ್ಣು ಕಳವು ಮಾಡಲು ಯತ್ನಿಸಿದ ನಾಲ್ವರು ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಸೇರಿದಂತೆ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿದ ಉಪರಕ್ಷಣಾಧಿಕಾರಿ ಎಚ್.ಪಿ.ರಾಜಣ್ಣ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಮುತ್ತುಕುಮಾರ್ ತಂಡದವರಿಂದ ಬಿಜಿಎಂಎಲ್ ಮೈಸೂರು ಮಿಲ್ನಲ್ಲಿ ಕಳವು ಮಾಡಲು ಬಿಜಿಎಂಎಲ್ನ ಹಿರಿಯ ಭದ್ರತಾಧಿಕಾರಿ ಆನಂದ್ಸಿಂಗ್ ರಾವತ್ 50 ಸಾವಿರ ಪಡೆದುಕೊಂಡಿದ್ದು ಮಾರಿಕುಪ್ಪಂ ಠಾಣಾ ವೃತ್ತ ನಿರೀಕ್ಷಕರೊಂದಿಗೆ ಮೊಬೈಲ್ ಮೂಲಕ ಮಾತುಕತೆ ನಡೆಸಿ ಕಳವಿಗೆ ಸಹಕರಿಸಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಸೋಮವಾರ ಸಂಜೆ ಕೆಜಿಎಫ್ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆ.31ರವರೆಗೆ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ. ಆನಂದ್ಸಿಂಗ್ ರಾವತ್ ಅವರ ಮನೆಯನ್ನು ಪರಿಶೀಲಿಸಿದ ಪೊಲೀಸರು 24 ಸಾವಿರ ನಗದು ವಶಪಡಿಸಿಕೊಂಡಿರುವುದಾಗಿ ಉಪರಕ್ಷಣಾಧಿಕಾರಿ ಹೆಚ್.ಪಿ.ರಾಜಣ್ಣ ತಿಳಿಸಿದ್ದಾರೆ.
ಬಂಧಿತ ಆರೋಪಿ ಆನಂದ್ ಸಿಂಗ್ ರಾವತ್ ಸೇನೆಯಲ್ಲಿ ಸೆಕೆಂಡ್ ಇನ್ ಕಮಾಂಡೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕೇಂದ್ರ ಸರ್ಕಾರ ಒಂದು ವರ್ಷದ ಹಿಂದೆ ಕೆಜಿಎಫ್ ಬಿಜಿಎಂಎಲ್ ಚಿನ್ನದ ಗಣಿಯಲ್ಲಿ ಹೆಚ್ಚುವರಿ ಭದ್ರತಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.