ಅತಂತ್ರ ಪುರಸಭೆಯಲ್ಲಿ ತಂತ್ರಗಾರಿಕೆ ಶುರು...
ಬಾಗೇಪಲ್ಲಿ: ಯಾವ ಪಕ್ಷಕ್ಕೂ ಬಹುಮತವಿಲ್ಲದೇ ಅತಂತ್ರ ಸ್ಥಿತಿಯಲ್ಲಿರುವ ಇಲ್ಲಿನ ಪುರಸಭೆಯಲ್ಲಿ 5 ತಿಂಗಳ ತಡವಾಗಿ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಎರಡೂ ಸ್ಥಾನಗಳು ಯಾರ ಪಾಲಾಗಲಿವೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ಕಳೆದ ಮಾ.7 ರಂದು 23 ಸ್ಥಾನಗಳಿಗೆ ನಡೆದ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 6, ಸಿಪಿಐ(ಎಂ) 6, ಜೆಡಿಎಸ್2, ಕೆಜೆಪಿ 3 ಹಾಗೂ ಪಕ್ಷೇತರ 6 ಸದಸ್ಯರು ಪುರಸಭೆಗೆ ಆಯ್ಕೆಯಾಗುವ ಮೂಲಕ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲದೆ ಅತಂತ್ರ ಸ್ಥಿತಿ ಏರ್ಪಟ್ಟಿತ್ತು. ಈಗ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಎ) ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಎಂದು ಸರ್ಕಾರ ಮೀಸಲಾತಿ ಪ್ರಕಟಿಸಿದೆ.
ಹೀಗಾಗಿ ನೂತನ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗಾಗಿ ಸ್ಪರ್ಧೆ ಮಾಡಲು ತಾ ಮುಂದು ನಾ ಮುಂದು ಎನ್ನುವ ರೀತಿಯಲ್ಲಿ ಅಧಿಕಾರದ ಗುದ್ದುಗೆ ಹಿಡಿಯುವ ನಿಟ್ಟಿನಲ್ಲಿ ತೀವ್ರ ಪೈಪೋಟಿ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಕಾಂಗ್ರೆಸ್ ಸದಸ್ಯರಿಗೆ ಹಾಗೂ ಪಕ್ಷೇತರರಿಗೆ ಯಾವುದೇ ರೀತಿಯಲ್ಲಿ ಅಧ್ಯಕ್ಷ ಸ್ಥಾನ ಪಡೆಯಲು ಅವಕಾಶ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಪ್ರಬಲವಾಗಿ ಕೇಳಿ ಬರುತ್ತಿರುವ ಹೆಸರು: ಸರ್ಕಾರ ಪ್ರಕಟಿಸಿರುವ ಮೀಸಲಾತಿಯ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಎ). ಅದರಂತೆ ಪಟ್ಟಣದ ಸಿಪಿಐ(ಎಂ) ಪಕ್ಷದ ಸದಸ್ಯೆ ಜ್ಯೋತಿ, ಜೆಡಿಎಸ್ ಸದಸ್ಯೆ ಹುಸೇನ್‌ಭಿ ಹಾಗೂ ಕೆಜೆಪಿ ಸದಸ್ಯೆ ಉಷಾರಾಣಿ ಸ್ಫರ್ಧೆಯಲ್ಲಿದ್ದಾರೆ. ಸಾಮಾನ್ಯ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಮಮತಾ ನಾಗರಾಜರೆಡ್ಡಿ, ಪಕ್ಷೇತರ ಸದಸ್ಯ ಆ.ನ.ಮೂರ್ತಿ, ಮಧುಸೂದನರೆಡ್ಡಿ, ನರಸಿಂಹಯ್ಯಶೆಟ್ಟಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿವೆ. ಇಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಅಧ್ಯಕ್ಷ ಸ್ಥಾನ ಪಡೆಯಲು ಕನಿಷ್ಠ 13 ಸದಸ್ಯರ ಬೆಂಬಲ ಇರಬೇಕು. ಸಿಪಿಐ(ಎಂ) ಪಕ್ಷ 6 ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿದ್ದು ಇನ್ನೂ 7 ಸದಸ್ಯರ ಬೆಂಬಲ ಅವಶ್ಯಕತೆ ಇದೆ. ಆದರೆ ಕಾಂಗ್ರೆಸ್ ಇಲ್ಲವೆ ಪಕ್ಷೇತರ ಸದಸ್ಯರ ಬೆಂಬಲ ಪಡೆಯಬೇಕು. ಇದು ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಬಲ್ಲ ಮೂಲಗಳ ಪ್ರಕಾರ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟರೆ ಸಿಪಿಐ(ಎಂ)ಗೆ ಕಾಂಗ್ರೆಸ್‌ನ ಸದಸ್ಯರ ಬೆಂಬಲ ಸಿಗಬಹುದು ಎಂದು ತಿಳಿದುಬಂದಿದೆ. ಕೆಜೆಪಿಯಿಂದ ಗೆದ್ದಿರುವ ಉಷಾರಾಣಿ ಪಕ್ಷಕ್ಕೆ ಕೈಕೊಟ್ಟು ವಿಧಾನಸಭಾ ಚುನಾವಣೆ ವೇಳೆ ಎಸ್.ಎನ್.ಸುಬ್ಬಾರೆಡ್ಡಿ ಬಣದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರ ಕೆಲವು ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಣದಲ್ಲಿ ಉಳಿಸಿಕೊಳ್ಳುವ ಕಸರತ್ತು ನಡೆಯುತ್ತಿದೆ ಎನ್ನಲಾಗುತ್ತಿದೆ.
ಆದರೆ ಯಾವ ಸದಸ್ಯರು ಯಾವ ಪಕ್ಷದ ಕಡೆಗೆ ವಾಲುತ್ತಾರೋ ತಿಳಿಯುತ್ತಿಲ್ಲ. ಇನ್ನೂ ಬಹುತೇಕ ಪಕ್ಷೇತರ ಸದಸ್ಯರು ಈಗಾಗಲೇ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೂ ಪಕ್ಷೇತರ ಸದಸ್ಯರಿಗೆ ಇಲ್ಲಿ ಬಹಳ ಬೇಡಿಕೆ ಬರುತ್ತೆ ಎಂಬುದು ರಾಜಕೀಯ ಪಂಡಿತರ ಅನಿಸಿಕೆ.