ಕಡಗಟ್ಟೂರು ಗೋಮಾಳ ಅತಿಕ್ರಮಣ ತೆರವು
ಕ.ಪ್ರ.ವಾರ್ತೆ ಕೋಲಾರ ಆ.27
ತಾಲೂಕಿನ ಕಡಗಟ್ಟೂರು ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಕೆಲವರು ಅತಿಕ್ರಮಿಸಿದ್ದ ಸರ್ಕಾರಿ ಗೋಮಾಳ ಜಾಗವನ್ನು ಮಾತುಕತೆಯ ಮೂಲಕ ತೆರವುಗೊಳಿಸಿದ ಶಾಸಕ ವರ್ತೂರು ಪ್ರಕಾಶ್ ಈ ಸ್ಥಳದಲ್ಲಿ ಸುಮಾರು 100 ಮಂದಿ ಬಡವರಿಗೆ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಶಾಸಕರು, ಸುಮಾರು 10 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ರೈತರೊಂದಿಗೆ ಗ್ರಾಮದ ಮುಖಂಡರ ಹಾಗೂ ಅಧಿಕಾರಿಗಳ ಸಮಕ್ಷಮದಲ್ಲಿ ಸಂಧಾನ ನಡೆಸಿ ಬಡವರ ಹಿತದೃಷ್ಟಿಯಿಂದ ಒತ್ತುವರಿ ಸ್ಥಳ ಬಿಟ್ಟುಕೊಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಒತ್ತುವರಿದಾರರು ಜಮೀನು ತೆರವುಗೊಳಿಸಲು ಸಮ್ಮತಿ ಸೂಚಿಸಿದರು.
ಕಳೆದ ಮೂರು ದಿನಗಳಿಂದ ಜಮೀನು ಒತ್ತುವರಿದಾರರೊಂದಿಗೆ ಮಾತುಕತೆ ನಡೆಸಿದ್ದ ಶಾಸಕರು, ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ, ಒತ್ತುವರಿ ತೆರವುಗೊಳಿಸಿದ ಸ್ಥಳವನ್ನು ಸುಮಾರು 45 ಜೆಸಿಬಿ, 10 ಟ್ರ್ಯಾಕ್ಟರ್‌ಗಳನ್ನು ಬಳಸಿ ಜಮೀನನ್ನು ಮಟ್ಟ ಮಾಡಿಸುವ ಕಾರ್ಯವನ್ನು ಖುದ್ದು ನಿಂತು ನೆರವೇರಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆ ಗಳಿಸಿದರು.
ಈ 10 ಎಕರೆ ಸ್ಥಳವನ್ನು ಬಡವರಿಗೆ ಸೂರು ಕಲ್ಪಿಸುವ ದೃಷ್ಟಿಯಿಂದ ನಿವೇಶನಗಳನ್ನಾಗಿ ವಿಂಗಡಿಸಿ ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಮುಖಂಡರಾದ ಬೆಗ್ಲಿ ಪ್ರಕಾಶ್, ರಘುರಾಂ, ದೇವರಾಜ್, ವೆಂಟಕರೆಡ್ಡಿ ಮತ್ತಿತರರು ಇದ್ದರು.