ಗಣೇಶ ಹಬ್ಬದಲ್ಲಿ ಗಲಾಟೆ ಆಗದಂತೆ ಎಚ್ಚರ ವಹಿಸಿ
ಶಿಡ್ಲಘಟ್ಟ: ಈ ಬಾರಿ ಗಣೇಶನ ಹಬ್ಬ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ಆರ್.ಜಗದೀಶ್ ಹೇಳಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನ ಪ್ರತಿ ಹಳ್ಳಿಯಲ್ಲೂ ಗಣೇಶನ ಹಬ್ಬ ಆಚರಣೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಗಣೇಶನ ಪ್ರತಿಮೆ ಪ್ರತಿಷ್ಠಾಪಿಸುವ ಸ್ಥಳ, ವಿಸರ್ಜನೆಯ ವೇಳೆಯಲ್ಲಿ ಮೆರವಣಿಗೆ ಹೋಗುವ ಮಾರ್ಗ, ಎಷ್ಟು ದಿನಗಳ ಕಾಲ ಪೂಜೆಮಾಡುತ್ತಾರೆ ಯಾವ ಸಂಘಟನೆಯಿಂದ ಪ್ರತಿಷ್ಠಾಪನೆ ಮಾಡುತ್ತಾರೆ, ಮುಖಂಡರ ವಿವರಗಳನ್ನು ಪೊಲೀಸ್ ಠಾಣೆಗೆ ನೀಡಬೇಕು. ಪಟ್ಟಣದಲ್ಲಿ ಪುರಸಭೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಆಯಾ ಗ್ರಾಮ ಪಂಚಾಯ್ತಿಗಳಿಂದ ಅನುಮತಿಯನ್ನು ಪಡೆಯಬೇಕು. ದ್ವನಿವರ್ಧಕ ಹಾಗೂ ದೀಪಾಲಂಕಾರಕ್ಕೆ ಬೆಸ್ಕಾಂ ಇಲಾಖೆಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೂ ಆಯೋಜನಕರೆ ನೇರ ಹೊಣೆಗಾರರಾಗುತ್ತಾರೆ. ರಾತ್ರಿ ಹತ್ತು ಘಂಟೆಯ ನಂತರ ದ್ವನಿವರ್ಧಕಗಳನ್ನು ನಿಲ್ಲಿಸಬೇಕು, ಅಶ್ಲೀಲ ನೃತ್ಯ, ಹಾಡುಗಳನ್ನು ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣೇಶನ ವಿಸರ್ಜನೆಯನ್ನು ಸಂಜೆ 06 ಘಂಟೆಯ ಒಳಗೆ ಮಾಡಬೇಕೆಂದು ಹೇಳಿದರು.
ಪಿಎಸ್.ಐ.ಗಳಾದ ಪಿ.ಬಿ.ಹನುಮಂತಪ್ಪ, ಪುರುಷೋತ್ತಮ್, ತಬರೆಆಲಂಪಾಷಾ, ಪುರಸಭಾ ಮುಖ್ಯಾಧಿಕಾರಿ ಚೆನ್ನರಾಯಪ್ಪ, ಬೆಸ್ಕಾಂನ ಎ.ಡಬ್ಯು.ಡಿ ಹರಿಬಾಬು, ಪುರಸಭಾ ಸದಸ್ಯ ಚಿಕ್ಕಮುನಿಯಪ್ಪ, ಮುಗಲಡಪಿ ನಂಜಪ್ಪ, ಕನ್ನಡ ಸೇನೆಯ ಖ.ರಾ.ಖಂಡೇರಾವ್, ದಲಿತ ಸಂಘರ್ಷ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗನರಸಿಂಹ, ನಗರಾಧ್ಯಕ್ಷ ಕೆ.ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.