ಗ್ರಾಮಸಭೆಗೆ ಅಧಿಕಾರಿಗಳ ಗೈರು ಖಂಡಿಸಿ ಶಾಸಕಿ ರಾಮಕ್ಕ, ಸಂಪಂಗಿ ಪ್ರತಿಭಟನೆ
ಕೆಜಿಎಫ್: ಬೇತಮಂಗಲ ಗ್ರಾಮ ಪಂಚಾಯಿತಿ ಮುಂಭಾಗ ಏರ್ಪಡಿಸಿದ್ದ ಗ್ರಾಮಸಭೆಗೆ ತಾಲೂಕು ಮಟ್ಟದ ಯಾವುದೇ ಅಧಿಕಾರಿಗಳು ಹಾಜರಾಗದ ಕಾರಣ ಆಕ್ರೋಶಗೊಂಡ ಕೆಜಿಎಫ್ ಶಾಸಕಿ ವೈ.ರಾಮಕ್ಕ ಹಾಗೂ ಮಾಜಿ ಶಾಸಕ ವೈ.ಸಂಪಂಗಿ ಗ್ರಾಪಂ ಅಧ್ಯಕ್ಷೆ ರಾಧಮ್ಮ ಸೇರಿದಂತೆ ಸದಸ್ಯರುಗಳು ಬೇತಮಂಗಲ ಠಾಣೆ ಮುಂಭಾಗ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮಸಭೆಗಳನ್ನು ಆಯಾ ಶಾಸಕರ ನೇತೃತ್ವದಲ್ಲಿ ನಡೆಸಿ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಸೋಮವಾರದಂದು ಏರ್ಪಡಿಸಲಾಗಿದ್ದ ಗ್ರಾಮ ಸಭೆಗೆ ಯಾವುದೇ ಅಧಿಕಾರಿ ಬಂದಿರಲಿಲ್ಲ ಹಾಗೂ ಇದೇ ಗ್ರಾಮದ ಲಕ್ಷ್ಮಮ್ಮ ಎಂಬುವರು ರಾಜಕಾಲುವೆಯನ್ನು ಆಕ್ರಮಿಸಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ನಿರ್ಧರಿಸಿದ್ದ ಶಾಸಕಿ ಹಾಗೂ ಗ್ರಾಮಸ್ಥರು ಬಸ್ ನಿಲ್ದಾಣದ ಬಳಿ ಕೆಲ ಕಾಲ ರಸ್ತೆತಡೆ ನಡೆಸಿದರು.
ತಾವು ಬಿಜೆಪಿ ಪಕ್ಷದ ಶಾಸಕಿಯಾದ ಕಾರಣ ನಮಗೆ ಯಾವುದೇ ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಹಾಗೂ ನಮ್ಮ ಕಾರ್ಯಕ್ರಮಗಳ ಕುರಿತು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಮುಖ್ಯಮಂತ್ರಿ ಹಾಗೂ ಸ್ಪೀಕರ್‌ಗೆ ದೂರು ನೀಡುವುದಾಗಿ ಶಾಸಕಿ ವೈ.ರಾಮಕ್ಕ ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಂಗಾರಪೇಟೆ ತಾ.ಪಂ. ಇಒ ಹಾಗೂ ಪೊಲೀಸ್ ವೃತ್ತನಿರೀಕ್ಷಕ ಶಿವಕುಮಾರ್ ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಯ ಅದಿಕಾರಿಗಳು ಭಾಗವಹಿಸುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಬೇತಮಂಗಲ ಗ್ರಾಮದ ಮುಖಂಡರು, ಗ್ರಾಮಸ್ಥರು, ಗ್ರಾಮ ಪಂ. ಸದಸ್ಯರು ಮಾಜಿ ಸದಸ್ಯರು ಸೇರಿದಂತೆ ನೂರಾರು ಮಹಿಳೆಯರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.