ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇವರಗುಡಿಪಲ್ಲಿಯಲ್ಲಿ 'ರಾಷ್ಟ್ರಧ್ವಜ' ಶೋಕಾಚರಣೆ!

Srinivasa Murthy VN
Updated On : 27 Aug 2013, 11:45 am

ಬಾಗೇಪಲ್ಲಿ: ದೇಶದ ಗಣ್ಯರು ಯಾರಾದರೂ ನಿಧನ ಹೊಂದಿದರೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಿ ಗೌರವ ಸೂಚಿಸುವುದು ಸಂಪ್ರದಾಯ. ಆದರೆ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾಮಾನ್ಯ ದಿನದಲ್ಲೂ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸುವುದರ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ತಾಲೂಕಿನ ದೇವರಗುಡಿಪಲ್ಲಿ ಗ್ರಾಪಂ ಕಚೇರಿಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಗ್ರಾಪಂ ಕಚೇರಿ ಮುಂಭಾಗದ ಧ್ವಜಸ್ತಂಭದ ಮೇಲೆ ರಾಷ್ಟ್ರಧ್ವಜವನ್ನು ಗ್ರಾಪಂ ಅಧಿಕಾರಿಗಳು ಹಾರಿಸಿದ್ದರು. ಸಾಮಾನ್ಯವಾಗಿ ಕಾನೂನು ಪ್ರಕಾರ ರಾಷ್ಟ್ರಧ್ವಜವನ್ನು ಸ್ತಂಭದ ಮೇಲ್ಬಾಗಕ್ಕೆ ಕಟ್ಟಬೇಕು. ಆದರೆ ಅಧಿಕಾರಿ ಬೇಜವಾಬ್ದಾರಿಯಿಂದ ಧ್ವಜವನ್ನು ಅರ್ಧ ಮಟ್ಟಕ್ಕೆ ಕಟ್ಟಿ ಶೋಕಾಚರಣೆ ಮಾಡುವ ರೀತಿಯಲ್ಲಿ ಹಾರಿಸಿದ್ದಾರೆ.
ಈ ವಿಷಯವನ್ನು ಗ್ರಾಮಸ್ಥರು ಮಾಧ್ಯಮದವರಿಗೆ ನೀಡಿದ್ದು ಪತ್ರಕರ್ತರು ಸದರಿ ಸ್ಥಳಕ್ಕೆ ದೌಡಾಯಿಸಿದಾಗ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಾಡುತ್ತಿದ್ದುದು ಕಂಡು ಬಂದಿತು.
ಈ ಬಗ್ಗೆ ಗ್ರಾಪಂ ಸಿಬ್ಬಂದಿಯ ಗಮನಕ್ಕೆ ತಂದ ಕೂಡಲೇ ತಮ್ಮ ತಪ್ಪಿನ ಅರಿವಾಗಿ ತರಾತುರಿಯಲ್ಲಿ ಬೋರ್‌ವೆಲ್ ರಿಪೇರಿ ಮಾಡುವ ವಾಹನವನ್ನು ತಂದು ಧ್ವಜಸ್ತಂಭಕ್ಕೆ ಹಾಕಿರುವ ಕಬ್ಬಿಣದ ಪೈಪಿನ ಮೇಲ್ಭಾಗವನ್ನು ಕತ್ತರಿಸುವ ಕೆಲಸಕ್ಕೆ ಮುಂದಾದರು. ತರಾತುರಿಯಲ್ಲಿ ಇದನ್ನು ಮುಗಿಸುವ ಯತ್ನ ಮಾಡಿದರಾದರೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಗ್ರಾಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಂತರ ಈ ಸಂಬಂಧವಾಗಿ ಅದೇ ಗ್ರಾಪಂ ವ್ಯಾಪ್ತಿಯ ಮುದ್ದಲಪಲ್ಲಿ ಗ್ರಾಮದ ಎಂ.ವಿ.ವೆಂಕಟಪ್ಪ ಎಂಬುವವರು ಪೊಲೀಸರಿಗೆ ದೂರು ನೀಡಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement