ಬಯೋ ಪ್ರಾಡಕ್ಟ್ಗಳ ಮಾರಾಟಕ್ಕೆ ಅವಕಾಶ ನೀಡಿ
ಕೋಲಾರ: ಜಿಲ್ಲೆಯಲ್ಲಿ ಬಯೋ ಪ್ರಾಡಕ್ಟ್ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕೃಷಿ ಸಾಮಗ್ರಿಗಳ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘವು ಮಂಗಳವಾರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಚಿಕ್ಕಣ್ಣ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ನಕಲಿ ಕೀಟನಾಶಕಗಳನ್ನು ಮಾರಾಟ ಮಾಡಲಾಗುತ್ತಿದೆಯೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಕೀಟನಾಶಕದ ಕಂಪನಿ ಮತ್ತು ಮಿಶ್ರಣದ ವಿವರಗಳನ್ನು ಹೊಂದಿಲ್ಲದ ಯಾವುದೇ ಕೀಟನಾಶಕಗಳನ್ನು ಮಾರಾಟ ಮಾಡದಂತೆ ನಿಷೇಧಿಸಿರುವುದರಿಂದ ಅಸಲಿ ಕಂಪನಿಗಳ ಬಯೋ ಪ್ರಾಡಕ್ಟ್ಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಮಾರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಯೋ ಪ್ರಾಡಕ್ಟ್ಗಳ ನಿಷೇಧ ಮಾಡಿರುವುದರಿಂದ ರೈತರು ಹೊರ ರಾಜ್ಯಗಳಿಂದ ಕೀಟನಾಶಕ ಖರೀದಿ ಮಾಡುವಂತಾಗಿದೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಬಯೋ ಪ್ರಾಡೆಕ್ಟ್ಗಳ ಮಾರಾಟಕ್ಕೆ ಅವಕಾಶವಿದ್ದು, ಒಂದು ವೇಳೆ ಕೋಲಾರದಲ್ಲಿ ನಕಲಿ ಔಷಧಿ ಮಾರಾಟವಾಗುತ್ತಿದ್ದರೆ ಅಧಿಕಾರಿಗಳು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿ ನಕಲಿ ಎಂದು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲವೆಂದು ಸಂಘದ ಮುಖಂಡರು ತಿಳಿಸಿದರು.
ಸಂಘದ ಅಧ್ಯಕ್ಷ ವೇಮನ್ನ, ಉಪಾಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಖಜಾಂಚಿ ಕೋಟೇಶ್ವರ, ಪದಾಧಿಕಾರಿಗಳಾದ ನಾಗೇಂದ್ರ, ನಾಗರಾಜ್, ಸುಜಯ್, ಟೇಕಲ್ ಶ್ರೀನಿವಾಸ್, ಪ್ರಭಾಕರಗುಪ್ತ ಮನವಿ ನೀಡುವಾಗ ಇದ್ದರು.