ಮನೋಜ್ ಕುಮಾರ್ಗೆ ದೇಹದಾರ್ಢ್ಯ ಪ್ರಶಸ್ತಿ
ಕೋಲಾರ: ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಎಲೈಟ್ ಜಿಮ್ ಮತ್ತು ಫಿಟ್ನೆಸ್ ಜೋಮ್ ವತಿಯಿಂದ ಇತ್ತೀಚೆಗೆನಡೆದ ರಾಜ್ಯ ಮತ್ತು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಮೇಸ್ತ್ರಿ ನಾರಾಯಣಸ್ವಾಮಿ ಕ್ಲಾಸಿಕ್ -2013 ಪ್ರಶಸ್ತಿ ಹಾಗೂ 1 ಲಕ್ಷ ರು. ನಗದು ಬಹುಮಾನವನ್ನು ಬೆಂಗಳೂರಿನ ರಾಕ್ಸ್ಮಲ್ಟಿ ಜಿಮ್ನ ಮನೋಜ್ಕುಮಾರ್ ತಮ್ಮದಾಗಿಸಿಕೊಂಡರು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮಿಸ್ಟರ್ ಕೋಲಾರ ಪ್ರಶಸ್ತಿಗೆ ಮಾಲೂರಿನ ಎಂ.ಸೆಲ್ವಕುಮಾರ್ ಪಾತ್ರರಾದರು ಹಾಗೂ 25 ಸಾವಿರ ನಗದು ಬಹುಮಾನವನ್ನು ಪಡೆಯುವಲ್ಲಿ ಯಶಸ್ವಿಯಾದರು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ 35 ಕ್ಕೂ ಹೆಚ್ಚು ದೇಹದಾರ್ಢ್ಯ ಕ್ರೀಡಾ ಪಟುಗಳು ಭಾಗವಹಿಸಿದ್ದರಲ್ಲದೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 80ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದ 4 ಗುಂಪುಗಳಲ್ಲಿ 5 ಪ್ರಶಸ್ತಿಗಳನ್ನು ನೀಡಲಾಯಿತಲ್ಲದೆ, ಪ್ರತಿ ಗುಂಪಿಗೂ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ ಬಹುಮಾನವಾಗಿ 4 ಸಾವಿರ, ತೃತೀಯ ಬಹುಮಾನವಾಗಿ 3 ಸಾವಿರ, ನಾಲ್ಕನೇ ಬಹುಮಾನವಾಗಿ 2 ಸಾವಿರ ಹಾಗೂ 5ನೇ ಬಹುಮಾನವಾಗಿ 1 ಸಾವಿರ ರುಪಾಯಿಗಳನ್ನು ನೀಡಿ ಗೌರವಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಒಟ್ಟು 4 ಗುಂಪುಗಳು ಭಾಗವಹಿಸಿದ್ದು, ಪ್ರತಿ ಗುಂಪಿಗೂ ಪ್ರಥಮ ಬಹುಮಾನವಾಗಿ 3 ಸಾವಿರ, ದ್ವಿತೀಯ ಬಹುಮಾನ 2 ಸಾವಿರ, ತೃತೀಯ ಬಹುಮಾನ 1 ಸಾವಿರ ರು.ಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ರಾಜಮುರುಗನ್ ಅತಿಥಿ ಪ್ರದರ್ಶನ ನೀಡಿದರು.
ಕರ್ನಾಟಕ ಅಮೇಚ್ಯೂರ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್ನ ಚಂದ್ರಮೌಳಿ ಹಾಗೂ ಅವರ ತಂಡದಿಂದ ತೀರ್ಪುಗಾರರಾಗಿದ್ದರು.