ವಿದ್ಯಾರ್ಥಿಗಳಿಂದ ಶಾಸಕ ಕೃಷ್ಣಾರೆಡ್ಡಿ ಮುತ್ತಿಗೆ
ಚಿಂತಾಮಣಿ: ಪಟ್ಟಣದ ಸರ್ಕಾರಿ ಬಾಲಕರ ಪದವಿ ಕಾಲೇಜಿನಲ್ಲಿನ ಅಧ್ಯಾಪಕರು ಹಾಗೂ ಬೋಧಕೇತರರ ಕೊರತೆ ನಿವಾರಿಸಲು ಆಗ್ರಹಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ತಿ ಪರಿಷತ್ ತಾಲೂಕು ಶಾಖೆ ವತಿಯಿಂದ ನೂರಾರು ವಿದ್ಯಾರ್ಥಿಗಳು ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಸೇರಿ ಅಧ್ಯಾಪಕರು ಹಾಗೂ ಬೋಧಕೇತರರ ಕೊರತೆ ವಿದ್ಯಾರ್ಥಿಗಳಿಗೆ ಶಾಪವಾಗಿ ಪರಿಣಮಿಸಿದೆಯೆಂದು ಆರೋಪಿಸಿ ಪಟ್ಟಣದಲ್ಲಿನ ಪಿಟೀಲ್ ಲೇಔಟ್ ಬಳಿ ಇರುವ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮನೆ ಮುಂದೆ ನೂರಾರು ವಿದ್ಯಾರ್ಥಿಗಳು ಜಮಾಯಿಸಿ ಶಾಸಕರಿಗೆ ಮುತ್ತಿಗೆ ಹಾಕಿ ಕಾಲೇಜಿನ ಕುಂದು ಕೊರತೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಆಂಗ್ಲ ಭಾಷಾ ಅಧ್ಯಾಪಕರು ಇಲ್ಲದೆ, ಅಂತಿಮ ವರ್ಷ ಪದವಿ ಮುಗಿದ ಮೇಲೆ ಸ್ನಾತಕೋತ್ತರ ಪದವಿಗೆ ಹೋಗಲು ಅಂಕಪಟ್ಟಿಗಳು ಅತ್ಯವಶ್ಯಕವಾಗಿದ್ದು, ಈಗಾಗಲೇ ಸಮಸ್ಯೆಗಳ ತಾಣವಾಗಿರುವ ಬೆಂಗಳೂರು ವಿಶ್ವ ವಿದ್ಯಾಲಯ ಸಮಯಕ್ಕೆ ಸರಿಯಾಗಿ ಅಂಕಪಟ್ಟಿ ನೀಡುತ್ತಿಲ್ಲವೆಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಶಾಸಕರ ಮುಂದೆ ಹೇಳಿದರು. ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದ ಸಂದರ್ಭದಲ್ಲಿ ಕಾಲೇಜಿನಲ್ಲಿದ್ದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಕೆಟ್ಟು ಹೋಗಿದ್ದು, ಅಂದಿನಿಂದ ಇಂದಿನವರೆಗೂ ಯಂತ್ರವನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಶಾಸಕರಿಗೆ ವಿಧ್ಯಾರ್ಥಿಗಳು ದೂರು ನೀಡಿದರು.
ನಂತರ ಮಾತನಾಡಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ದೂರವಾಣಿ ಮುಖಾಂತರ ಉನ್ನತ ಶಿಕ್ಷಣ ಆಯುಕ್ತರೊಂದಿಗೆ ಮಾತನಾಡಿ ಕಾಲೇಜಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಒಂದು ವಾರದೊಳಗೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ವಿವಿಧ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ವಿದ್ಯಾರ್ಥಿ ಮುಖಂಡರಾದ ಮಂಜುನಾಥರೆಡ್ಡಿ, ವಿಜಯ್, ಮಂಜುನಾಥ್, ಅಸ್ಲಂ,ಮೂರ್ತಿ, ನವಾಜ್, ಸತೀಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.