ಶಾಸಕ, ಜಿಪಂ ಸದಸ್ಯರ ವಾಕ್ಸಮರ
ಬಂಗಾರಪೇಟೆ: ಕ್ಷೇತ್ರದಲ್ಲಿ ಪಡಿತರ ಕಾರ್ಡ್‌ಗಳ ಸಮಸ್ಯೆಗಳು ಮೀತಿ ಮೀರಿದೆ. ಆದರೆ ಗ್ರಾಮಸಭೆಗಳಲ್ಲಿ ಅಧಿಕಾರಿಗಳ ಗಮನ ಸೆಳೆಯಲು ಆಹಾರ ಇಲಾಖೆ ಅಧಿಕಾರಿಗಳೇ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಜಿಪಂ ಸದಸ್ಯ ಎಂ.ಎಸ್.ಆನಂದ್ ಆಕ್ಷೇಪ ವ್ಯಕ್ತಪಡಿಸಿದಾಗ ಶಾಸಕರು ಮಧ್ಯೆ ಪ್ರವೇಶಿಸಿ, ಇಬ್ಬರ ನಡುವೆ ವಾಗ್ದಾಳಿ ನಡೆದು ಸಭೆ ಕೆಲಕಾಲ ಗೊಂದಲದ ಗೂಡಾದ ಘಟನೆ ಮಾವಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆಯಿತು.
ತಾಲೂಕಿನ ಮಾವಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಸಭೆ ಪ್ರಾರಂಭವಾಗುತ್ತಿದ್ದಂತೆ ಜಿಪಂ ಸದಸ್ಯ ಆನಂದ್ ಎದ್ದು ನಿಂತು ಸರ್ಕಾರ ಪಡಿತರ ಚೀಟಿ ಪಡೆಯಲು ಸಂಪೂರ್ಣವಾಗಿ ಆನ್‌ಲೈನ್ ಮಾಡಿರುವುದರಿಂದ ಅಗತ್ಯ ದಾಖಲೆಗಳನ್ನು ಫಲಾನುಭವಿಗಳು ಸಲ್ಲಿಸಿದರೂ ಅರ್ಹರಿಗೆ ಮಾತ್ರ ಪಡಿತರ ಕಾರ್ಡ್ ದೊರೆಯುತ್ತಿಲ್ಲ. ಇನ್ನೂ ಕೆಲವರಿಗೆ ದಾಖಲೆಗಳನ್ನು ಸಲ್ಲಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದ ನಿಜವಾದ ಬಡವರು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಹೇಳುತ್ತಿದ್ದಂತೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಸಮಸ್ಯೆಗೆ ನಾನು ಉತ್ತರ ಕೊಡುತ್ತನೆ ಎಂದಾಗ, ನೀವು ಉತ್ತರ ಕೊಡುವ ಬದಲು ಆಹಾರ ಇಲಾಖೆ ಅಧಿಕಾರಿಗಳಿಂದ ಬಂದರೆ ಉತ್ತಮ. ಎಲ್ಲಿ ಅವರು ಸಭೆಗೆ ಬಂದಿಲ್ಲವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಇಬ್ಬರ ನಡುವೆ ಕೆಲ ಕಾಲ ವಾಕ್ಸಮರ ನಡೆಯಿತು.
ಸರ್ಕಾರ ಆನ್‌ಲೈನ್ ಮಾಡಿರುವುದರಿಂದ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ಸಮಸ್ಯೆಗಳ ಬಗ್ಗೆ ಶಾಸಕರಾದ ನೀವು ಆಹಾರ ಸಚಿವರೊಂದಿಗೆ ಚರ್ಚಿಸಿ ಕೆಲವು ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಆನಂದ್ ಆಗ್ರಹಿಸಿದರೂ ಶಾಸಕರು ಮಾತ್ರ ಈ ಸಣ್ಣ ವಿಷಯಕ್ಕೆ ಸಚಿವರೊಂದಿಗೆ ಚರ್ಚಿಸುವ ಬದಲಿಗೆ ನಾನೇ ಬಗೆಹರಿಸುತ್ತೇನೆ ಎಂದು ಸರ್ಕಾರ ನೀತಿ ನಿಯಮಗಳನ್ನು ಸಮರ್ಥಿಸಿಕೊಂಡು ಜಿಪಂ ಸದಸ್ಯರ ಆಕ್ಷೇಪಕ್ಕೆ ಲಗಾಮು ಹಾಕಿದರು.
ರಾಜ್ಯದ ಪ್ರಮುಖ ಜಲಾಶಯಗಳು ತುಂಬಿ ಹರಿಯುತ್ತಿದ್ದರೂ ವಿದ್ಯುತ್ ಸಮಸ್ಯೆ ಮಾತ್ರ ನೀಗಿಲ್ಲ. ಇದರಿಂದಾಗಿ ರೈತರ ಕೋಟ್ಯಂತರ ಬೆಳೆಗಳಿಗೆ ನೀರಿಲ್ಲದೆ ನಷ್ಟವಾಗುತ್ತಿದೆ ಎಂದು ರೈತರು ಶಾಸಕರ ಗಮನ ಸೆಳೆದು ಸಮಸ್ಯೆ ನೀಗಿಸುವಂತೆ ಕೋರಿದರು.
ಖಾಲಿ ಚೇರು, ಪಿಡಿಓಗೆ ಶಾಸಕ ನಾರಾಯಣಸ್ವಾಮಿ ಜೋರು
ಇದಾದ ಬಳಿಕ ಚಿಕ್ಕಅಂಕಂಡಹಳ್ಳಿ ಪಂಚಾಯ್ತಿಯಲ್ಲಿ ಗ್ರಾಮಸಭೆ ನಡೆಸಲು ಶಾಸಕರು ತೆರಳಿದಾಗ ಅಲ್ಲಿ ಗ್ರಾಮಸ್ಥರೇ ಇಲ್ಲದೆ ಖಾಲಿ ಕುರ್ಚಿಗಳು ಮಾತ್ರ ಇದ್ದಿದ್ದನ್ನು ಕಂಡು ಕೆಂಡಾಮಂಡಲರಾಗಿ ಪಿಡಿಒ ಚೌಡಪ್ಪರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಭೆ ಬಗ್ಗೆ ಮುಂಚಿತವಾಗಿ ಪ್ರಚಾರ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಸಂಪಂಗಿರೆಡ್ಡಿ, ತಹಸೀಲ್ದಾರ್ ಉಷಾ, ಇಒ ಡಾ- ಜಗದೀಶ್, ತಾಪಂ ಸದಸ್ಯೆ ವೆಂಕಟರತ್ನಮ್ಮ, ಗ್ರಾಮ ಪಂ- ಸದಸ್ಯ ರವಿಕುಮಾರ್, ಮುಖಂಡ ಪ್ರಸಾದ್ ನಾರಾಯಣಪ್ಪ ಮತ್ತಿತರರು ಇದ್ದರು.