ಹಣ ಪಡೆದು ಆಂತರಿಕ ಅಂಕ
ಬಾಗೇಪಲ್ಲಿ: ವಿದ್ಯಾರ್ಥಿಗಳಿಂದ ಉಪನ್ಯಾಸಕರೊಬ್ಬರು ಹಣ ಪಡೆದು ಇಂಟರ್ನಲ್ ಅಂಕಗಳನ್ನು ನೀಡಿ ಪಾಸ್ ಮಾಡುತ್ತಿರುವ ಪ್ರಕರಣ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.
ಉಪನ್ಯಾಸಕ ಮಹಾರುದ್ರರವರು ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಸುಮಾರು 62ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ತಲಾ 300 ರು.ಗಳಂತೆ ಸುಮಾರು 48 ಸಾವಿರ ರು. ಪಡೆದು ಇಂಟರ್ನಲ್ ಅಂಕಗಳನ್ನು ನೀಡುವ ಮೂಲಕ ಪಾಸ್ ಮಾಡಿರುವುದಕ್ಕೆ ಸಂಬಂಧಿಸಿದ ವಿಡೀಯೋ ದೃಶ್ಯಗಳ ತುಣುಕುಗಳನ್ನು ಹಾಗೂ ಮೌಖಿಕವಾಗಿ ಪ್ರಾಂಶುಪಾಲರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಪ್ರಾಂಶುಪಾಲರು ಉಪನ್ಯಾಸಕರ ಪರವಾಗಿ ಮಾತನಾಡುತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊರ ವಲಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೂರೆಂಟು ಸಮಸ್ಯೆಗಳು ತಾಂಡವಾಡುತ್ತಿವೆ. ಈ ಕಾಲೇಜಿನ ಪ್ರಾಂಶುಪಾಲ ಕಾಂತರಾಜುರವರ ದಿವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ವಿದ್ಯಾರ್ಥಿಗಳಿಂದ ಬಲವಂತವಾಗಿ ಹಣ ಪಡೆದು ಇಂಟರ್‌ನಲ್ ಮಾರ್ಕ್ಸ್ ಹಾಕುವ ಮೂಲಕ ಉತ್ತಮವಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಭವಿಷ್ಯವನ್ನು ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಆರೋಪಕ್ಕೆ ಉತ್ತರಿಸಿದ ಪ್ರಾಂಶುಪಾಲರು, ಇಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ವಿನಾ ಕಾರಣ ವಿದ್ಯಾರ್ಥಿಗಳು ಉಪನ್ಯಾಸಕರ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ. 60 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಳಿದವರು ಸರಿಯಾಗಿ ಅಭ್ಯಾಸ ಮಾಡದೇ ಇರುವುದರಿಂದ ಅನುತ್ತೀರ್ಣರಾಗಿದ್ದಾರೆ ಎಂದು ಹಾರಿಕೆ ಉತ್ತರ ನೀಡಿದರು.
ಪರೀಕ್ಷೆಯಲ್ಲಿ ಫೇಲ್ ಆಗುವುದು ಸಹಜ. ಆದರೆ ಯಾವ ವಿದ್ಯಾರ್ಥಿಯಿಂದಲೂ ಉಪನ್ಯಾಸಕರು ಹಣವನ್ನು ಪಡೆದು ಪಾಸ್ ಮಾಡಿಲ್ಲವೆಂದು ಸಮರ್ಥಿಸಿಕೊಂಡಾಗ ಗರಂ ಆದ ವಿದ್ಯಾರ್ಥಿಗಳು, ನಮ್ಮಲ್ಲಿ 48 ಸಾವಿರ ಹಣವನ್ನು ಪಡೆಯುತ್ತಿರುವ ವಿಡೀಯೋ ದೃಶ್ಯವಿದೆ. ಅದನ್ನು ನಿಮಗೆ ತೋರಿಸಲಾಗಿದೆ ಇಲ್ಲವೆಂದು ಇಲ್ಲಿ ಹೇಳಿ ಎಂದಾಗ, ನಿಜ ನಾನು ನೋಡಿದೆ. ಹಣ ಟೇಬಲ್ ಮೇಲೆ ಇಟ್ಟಿರುವ ದೃಶ್ಯವಿರುವುದರಿಂದ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪ್ಲೇಟ್ ತಿರುಗಿಸಿದರು.
ಆಗ ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು, ನನ್ನ ಗಮನಕ್ಕೆ ಯಾವುದೆ ವಿಷಯ ಬಂದಿಲ್ಲ. ಈ ವಿಚಾರ ನನಗೆ ಏನು ತಿಳಿದೇ ಇಲ್ಲ ಎಂದು ಹೇಳಿದ ನೀವು ಈಗ ಈ ರೀತಿಯಲ್ಲಿ ಹೇಳುತ್ತಿದ್ದೀರಿ ಹಾಗೂ ಉಪನ್ಯಾಸಕರು ಹಣವನ್ನು ಪಡೆದಿಲ್ಲ, ಇಲ್ಲವೆ ಪಡೆದಿದ್ದಾರೆ ಎನ್ನುವುದು ನಿಮಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು. ಕಾಲೇಜಿನಲ್ಲಿ 6 ಮಂದಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಲಾಗಿದೆ. ಆದರೆ ಇಲ್ಲಿ ಕೆಲಸ ನಿರ್ವಹಿಸುತ್ತಿರುವುದು ಮಾತ್ರ 3 ಮಂದಿ. ಉಳಿದ 3 ಮಂದಿಯ ಸಂಬಳ ಯಾರ ಜೇಬಿಗೆ ಸೇರುತ್ತಿದೆ. ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರಬೇಕಾದ ಪ್ರಾಂಶುಪಾಲರು ಸೇರಿದಂತೆ ಉಪನ್ಯಾಸಕರು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದರು.
ಇದರ ಬಗ್ಗೆ ಮೇಲಿನ ಅಧಿಕಾರಿಗಳಿಗೆ, ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ ವಿದ್ಯಾರ್ಥಿಗಳು ನಮ್ಮ ಭವಿಷ್ಯತ್ತಿನ ಜತೆಗೆ ಆಟವಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.