ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಿಂದೂ ಹಿತರಕ್ಷಣಾ ವೇದಿಕೆ ಬೈಕ್ ರ್ಯಾಲಿ

Srinivasa Murthy VN
Updated On : 27 Aug 2013, 11:44 am

ಕ.ಪ್ರ.ವಾರ್ತೆ ಕೋಲಾರ ಆ.27
ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿಳಂಬ ಮಾಡುತ್ತಿರುವುದು ಹಾಗೂ ಪರಿಕ್ರಮ ಯಾತ್ರೆ ನಿಷೇಧಿಸಿರುವುದನ್ನು ಖಂಡಿಸಿ ನಗರದಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರವಾಸಿ ಮಂದಿರದ ಆವರಣದಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂತ್ಯಗೊಂಡಿತು. ವೇದಿಕೆಯ ಮುಖಂಡರು ಯುಪಿ ಸರ್ಕಾರದ ವಿರುದ್ಧ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಅರ್ಪಿಸಿ ರಾಷ್ಟ್ರಪತಿಗಳಿಗೆ ರವಾನೆ ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ ಭಾರತವು ಹಿಂದೂ ಪ್ರಧಾನ ದೇಶವಾಗಿದ್ದು, ಇಲ್ಲಿ ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ಆದರೆ, ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿನ ಯುಪಿಎ ಸರ್ಕಾರಗಳು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಆಚರಣೆಗೆ ನಿಷೇಧ ವಿಧಿಸುತ್ತಿವೆ ಹಾಗೂ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅನಗತ್ಯ ಅಡ್ಡಿ ಉಂಟು ಮಾಡುತ್ತಿದೆ ಎಂದು ಆರೋಪಿಸಿದರು.
ಆಯೋಧ್ಯೆಯಲ್ಲಿನ ಶ್ರೀರಾಮ ಜನ್ಮಸ್ಥಳವನ್ನು 1528ರಲ್ಲಿ ಆಕ್ರಮಣ ಮಾಡಿರುವುದು ತಿಳಿದ ವಿಷಯವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಮಂದಿರದ ಪುನರ್ ನಿರ್ಮಾಣಕ್ಕಾಗಿ 76 ಬಾರಿ ಸಂಘರ್ಷಗಳು ನಡೆದು ಲಕ್ಷಾಂತರ ಜನರು ಬಲಿದಾನವಾಗಿದ್ದರೂ ಸರ್ಕಾರಗಳು ಹಿಂದೂಗಳ ಪರ ಯಾವುದೇ ಒಲವು ತೋರುತ್ತಿಲ್ಲ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತೀಯ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್ ಮಾತನಾಡಿ ಕಳೆದ ಜೂನ್‌ಲ್ಲಿ ಹರಿದ್ವಾರದಲ್ಲಿ ಧರ್ಮಾಚಾರ್ಯರ ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿ ಆಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಶಾಸನ ಜಾರಿಯಾಗಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ಉತ್ತರ ಪ್ರದೇಶ ಸರ್ಕಾರ ಇದಕ್ಕೆ ಅವಕಾಶ ನೀಡದೆ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡಿದೆ ಎಂದು ಕಿಡಿಕಾರಿದರು. ಯುವ ಮುಖಂಡ ಮುಕುಂದ ಮಾತನಾಡಿದರು.
ಮುಖಂಡರಾದ ರಮೇಶ್ ರಾಜ್ ಅರಸ್, ಶ್ರೀನಿವಾಸ್, ಪುನೀತ್ ಗೌಡ, ಅರುಣ್, ಮುರಳಿ, ಧನಶೇಖರ್, ಮುತ್ತು, ಮಹೇಶ್, ನಾಗರಾಜ್, ಓಂಪ್ರಕಾಶ್, ನಾಗೇಂದ್ರ, ಸುನೀಲ್, ಕಿಶೋರ್, ಅನೀಶ್, ದೇವರಾಜ, ಅಡಿಕೆ ನಾಗರಾಜ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement