ಆರೋಗ್ಯ ಅರಿವು ಮೂಡಿಸುವುದು ಜನಪ್ರತಿನಿಧಿಗಳ ಕರ್ತವ್ಯ: ಸುಧಾಕರ್
ಚಿಕ್ಕಬಳ್ಳಾಪುರ: ಮೂಲ ಸೌಕರ್ಯಗಳನ್ನು ಒದಗಿಸುವ ಜತೆಗೆ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮೂಡಿಸುವುದು ಜನಪ್ರತಿನಿಧಿಗಳ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಶಾಸಕ ಡಾ. ಕೆ. ಸುಧಾಕರ್ ಅಭಿಪ್ರಾಯಪಟ್ಟರು. ಅವರು ವೈದೇಹಿ ಆಸ್ಪತ್ರೆ ಸಹಯೋಗದೊಂದಿಗೆ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ಆ.31ರಂದು ತಿಪ್ಪೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಆರೋಗ್ಯ ತಪಾಸಣಾ ಉಚಿತ ಶಿಬಿರದ ಕುರಿತು ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು. ತಪಾಸಣೆಗೆ ಒಳಗಾಗದೇ ಅನೇಕ ರೋಗಗಳು ಜನರ ಅರಿವಿಗೆ ಬರುವುದಿಲ್ಲ. ತಾವು ನಿರೋಗಿಗಳು ಎಂದು ಭಾವಿಸಿರುತ್ತಾರೆ. ಅಲ್ಲದೇ ಅನೇಕ ರೋಗಗಳು ರೋಗಿಗಳ ಗಮನಕ್ಕೇ ಬರದೇ ಹೋಗುತ್ತವೆ. ಇದರಿಂದ ಇಂತಹ ಶಿಬಿರಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ಹೇಳಿದರು. ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆಗೆ ಒಳಪಟ್ಟವರಲ್ಲಿ ಅಗತ್ಯ ಇರುವವರಿಗೆ ಮೂರು ತಿಂಗಳ ಔಷಧವನ್ನು ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುವುದು. ಶಸ್ತ್ರ ಚಿಕಿತ್ಸೆ ಅಗತ್ಯ ಇರುವವರಿಗೆ ಕೂಡ ಅವಕಾಶ ಮಾಡಿಕೊಡಲಾಗುವುದು. ಕ್ಷೇತ್ರ ವ್ಯಾಪ್ತಿಯ ಬೇರೆ ಬೇರೆ ಕಡೆಗಳಲ್ಲಿ ಪ್ರತಿ ತಿಂಗಳು ಎರಡು ಶಿಬಿರ ಹಮ್ಮಿಕೊಳ್ಳಲಾಗುವುದು. ಭಾಗವಹಿಸುವವರಿಗೆ ಟ್ರಸ್ಟ್ ವತಿಯಿಂದ ಉಚಿತ ನೀರು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಜನಪರ ಕಾರ್ಯಕ್ರಮ ಇದಾಗಿದ್ದು, ಶಿಬಿರದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಸ್ಥಳೀಯ ಮುಖಂಡರು ಮಾಡಬೇಕೆಂದು ತಿಳಿಸಿದರು. ಈ ಸಭೆಯಲ್ಲಿ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಗ್ರಾ.ಪಂ. ಅಧ್ಯಕ್ಷ್ಯೆ ನಾರಾಯಣಮ್ಮ, ಪಿಡಿಒ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು. ಪಡಿತರ ಚೀಟಿ ಸಿಕ್ಕಿಲ್ಲ ಎಂದು ಕೆಲ ನಾಗರಿಕರು ಇದೇ ಸಂದರ್ಭ ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸುಳ್ಳು ಭರವಸೆ ನೀಡುವುದಿಲ್ಲ. ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಯನ್ನು ಸರ್ಕಾರ ಘೋಷಿಸಿದೆ. ಇಲ್ಲಿ ಬಿಪಿಎಲ್ ಕಾರ್ಯ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಭರವಸೆ ನೀಡಿದ ಮಾತ್ರಕ್ಕೆ ನಾಳೆಯೇ ಚೀಟಿ ಸಿಗುತ್ತದೆ ಎಂದು ಹೇಳಲಾರೆ. ಆದರೆ ತಮಗೆಲ್ಲಾ ಪಡಿತರ ಚೀಟಿ ತಲುಪುವಂತೆ ಮಾಡುತ್ತೇನೆ. ಜನರನ್ನು ಈ ವ್ಯವಸ್ಥೆ ಸರಿಯಾಗಿ ತಲುಪಲು ನಾಲ್ಕಾರು ತಿಂಗಳು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಿರಿ ಎಂದು ಮನವಿ ಮಾಡಿದರು. ಆ.31ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ತಿಪ್ಪೇನಹಳ್ಳಿಯಲ್ಲಿ ಶಿಬಿರ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಿವಪ್ರಸಾದ್ ಶಿಬಿರಕ್ಕೆ ಚಾಲನೆ ನೀಡುವರು. ಹೃದಯ, ನರ, ಸ್ತ್ರೀರೋಗ, ಮೂಳೆ, ದಂತ, ಇಎನ್ಟಿ, ನೇತ್ರ, ಮೂತ್ರಪಿಂಡ, ಕ್ಯಾನ್ಸರ್ ಹಾಗೂ ಮಕ್ಕಳ ಸಮಸ್ಯೆಗೆ ಸಂಬಂಧಿಸಿದ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ವಿವರಕ್ಕೆ 9448673993,8694948166 ನ್ನು ಸಂಪರ್ಕಿಸಬಹುದು.
ಗೋಪಾಲ ಕೃಷ್ಣನಿಗೆ ವಿಶೇಷ ಅಲಂಕಾರ
ಮಾಲೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಟ್ಟಣದ ಮಹಾರಾಜ ವೃತ್ತದಲ್ಲಿರುವ ಗೋಪಾಲ ಕೃಷ್ಣ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಯಿತು.
ಬೆಳಗ್ಗಿನಿಂದಲ್ಲೇ ಪೂಜಾ ವಿಧಿ, ವಿಧಾನದಲ್ಲಿ ಪಂಚಾಮೃತ ಅಭಿಷೇಕ, ರಜತ ಕವಚ ಅಲಂಕಾರ, ಹೂವಿನ ಅಲಂಕಾರ, ಷೋಡಷಿ ಪೂಜೆ ನಡೆಯಿತು. ಮಧ್ಯಾಹ್ನ ಪಟ್ಟಣದ ರಾಜಬೀದಿಯಲ್ಲಿ ಶ್ರೀ ಕೃಷ್ಣ ರಥಯಾತ್ರೆ ನಡೆಯಿತು. ಗೋಪಾಲ ಕೃಷ್ಣ ಹಾಗೂ ಹಂಸಧ್ವನಿ ಶ್ರೀನಿವಾಸ್ ಅವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಕೆ.ಆರ್. ನಂದಗೋಪಾಲ್, ಸುಜಯ ಲಕ್ಷ್ಮಿ, ಕೆ.ಎನ್. ನಾಗರಾಜ್, ಗುರುಪ್ರಸಾದ್, ಕಾರ್ತಿಕ್, ಅರ್ಚಕ ನಾಗಭೂಷಣ್, ಸೂರ್ಯಪ್ರಕಾಶ್ ಇದ್ದರು.