ಕೆಎಚ್ಚೆಮ್ಮೇ ಮತ್ತೆ ಕೈ ಹುರಿಯಾಳು
ಕ.ಪ್ರ.ವಾರ್ತೆ ಕೋಲಾರ ಆ.28
ಮುಂಬರುವ ಲೋಕಸಭಾ ಚುನಾವಣೆಗೆ ಕೋಲಾರ ಮೀಸಲು ಕ್ಷೇತ್ರದಿಂದ ಮತ್ತೊಮ್ಮೆ ಹಾಲಿ ಸಂಸದ, ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರನ್ನೇ ಸರ್ವಸಮ್ಮತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲು ಜಿಲ್ಲಾ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ನಿರ್ಣಯಿಸಿದ್ದಾರೆಂದು ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ್ದ ಅಲ್ಪಸಂಖ್ಯಾತರ ವಿಭಾಗದ ಮುಖಂಡ ಮಸೂದ್ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಸೋನಿಯಾಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೂಚನೆಯಂತೆ ನಾವಿಂದು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನು ಕರೆದು ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದಿಂದ ಯಾರು ಅಭ್ಯರ್ಥಿ ಆಗಬೇಕೆಂದು ಅಭಿಪ್ರಾಯ ಸಂಗ್ರಹಣೆ ಮಾಡಿದ್ದೇವೆ, ಸಭೆಯಲ್ಲಿ ಹಾಜರಿದ್ದ ಪ್ರತಿಯೊಬ್ಬರು ಹಾಲಿ ಸಂಸದ, ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರನ್ನೇ ಮತ್ತೆ ಅಭ್ಯರ್ಥಿ ಮಾಡುವುದು ಸೂಕ್ತವೆಂದು ನಿರ್ಣಯ ಕೈಗೊಂಡಿದ್ದಾರೆಂದು ತಿಳಿಸಿದರು.
ಕೋಲಾರ ಕ್ಷೇತ್ರದಿಂದ ಈಗಾಗಲೇ ಆರು ಬಾರಿ ಸಂಸತ್ತಿಗೆ ಆಯ್ಕೆಯಾಗಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಕೆ.ಹೆಚ್. ಮುನಿಯಪ್ಪನವರು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರುವುದು ಅವರೊಬ್ಬರಿಗೆ ಮಾತ್ರ, ಮುಂದಿನ ಚುನಾವಣೆಗೂ ಮುನಿಯಪ್ಪನವರನ್ನೇ ಸರ್ವಸಮ್ಮತ ಅಭ್ಯರ್ಥಿಯಾಗಿ ಸಭೆ ಸೂಚಿಸುತ್ತದೆ ಎಂದು ಬಂಗಾರಪೇಟೆ ಶಾಸಕ ಕೆ.ಎಂ. ನಾರಾಯಣಸ್ವಾಮಿ ಹೇಳಿದಾಗ, ಮತ್ತೊಬ್ಬ ಹಿರಿಯ ಮುಖಂಡ, ಜಿ.ಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ ಅನುಮೋದಿಸಿದ್ದನ್ನು ಸಭೆ ಒಪ್ಪಿಗೆ ಸೂಚಿಸಿತು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್, ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್, ವಿಧಾನಸಭೆ ಮಾಜಿ ಸ್ಪೀಕರ್ ವಿ.ಆರ್. ಸುದರ್ಶನ್, ಕೆಪಿಸಿಸಿಯಿಂದ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳಲು ನೇಮಕವಾಗಿರುವ ಕಮಲಮ್ಮ, ಮಾಜಿ ಸಚಿವೆ ರಾಣಿ ಸತೀಷ್, ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿರುವ ಮಾಲೂರು ಕ್ಷೇತ್ರದ ಚನ್ನಕೇಶವ, ಚಿಂತಾಮಣಿಯ ವಾಣಿಕೃಷ್ಣಾರೆಡ್ಡಿ ಮುಂತಾದವರು ಮಾತನಾಡಿ, ಕೆ.ಹೆಚ್. ಮುನಿಯಪ್ಪನವರೇ ಪಕ್ಷದ ಅಭ್ಯರ್ಥಿಯಾಗಬೇಕು, ಇಡೀ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರ ಅಭಿಪ್ರಾಯ ಇದಾಗಿದ್ದು ಮುನಿಯಪ್ಪನವರನ್ನು ಸರ್ವಸಮ್ಮತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದನ್ನು ಕೆಪಿಸಿಸಿ ಮುಖೇನ ಎಐಸಿಸಿಗೆ ರವಾನೆ ಮಾಡುವಂತೆ ನಿರ್ಣಯ ಮಾಡಿದ್ದು, ಇದನ್ನು ತಾವು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ವರದಿ ಮಾಡುವುದಾಗಿ ನುಡಿದರು.
ಕೆ.ಹೆಚ್. ಮುನಿಯಪ್ಪನವರ ಪರವಾಗಿ ಮಂಡನೆ ಆಗಿರುವ ನಿರ್ಣಯವನ್ನು ಎಐಸಿಸಿಗೆ ಇನ್ನೊಂದು ವಾರದಲ್ಲಿ ಸಲ್ಲಿಸಲಾಗುತ್ತದೆ, ಕೋಲಾರ ಕ್ಷೇತ್ರದಿಂದ ಒಬ್ಬರ ಹೆಸರನ್ನು ಮಾತ್ರ ಎಐಸಿಸಿಗೆ ಶಿಪಾರಸ್ಸು ಮಾಡಲಾಗುತ್ತದೆ, ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಎಐಸಿಸಿಯ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮತ್ತೊಬ್ಬ ವೀಕ್ಷಕ ಎಂ.ಆರ್. ಸೀತಾರಾಂ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವೀಕ್ಷಕ ಎಲ್.ಎನ್. ಶರ್ಮ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಾಲಿ ಬಂಗಾರಪೇಟೆ ಪುರಸಭೆ ಸದಸ್ಯ ಚಂದ್ರಾರೆಡ್ಡಿ, ಕೆಪಿಸಿಸಿ ಎಸ್.ಸಿ ವಿಭಾಗದ ಸಂಚಾಲಕ ಕುಮಾರ್, ಮುಖಂಡರಾದ ಗೋಪಾಲಗೌಡ, ಯಲವಾರ ರವಿ, ಜೆ.ಕೆ.ಜಯರಾಂ, ಊರು ಬಾಗಿಲು ಶ್ರೀನಿವಾಸ್, ಚಂಗೋಲಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್ ಮುಂತಾದವರು ಇದ್ದರು.
ನಾನೂ ಆಕಾಂಕ್ಷಿ ಎಂದ ಶಂಕರ್
ಕಾಂಗ್ರೆಸ್ ಸಭೆಯಲ್ಲಿ ನಡೆದ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತಿದ್ದ ಸಂದರ್ಭದಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವ ಶಂಕರ್ ಮಧ್ಯ ಪ್ರವೇಶಿಸಿ, ಕೋಲಾರವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬಯಸಿರುವ ಆಕಾಂಕ್ಷಿತರಲ್ಲಿ ನಾನು ಒಬ್ಬ ಎಂದು ಹೇಳಿದರು. ಇದರಿಂದ ವಿವಾದ ಉದ್ಭವವಾಗಬಹುದೆಂಬುದನ್ನು ಅರಿತ ವೀಕ್ಷಕ ಎಂ.ಆರ್. ಸೀತಾರಾಂ, ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿಲ್ಲ. ಒಂದು ವೇಳೆ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹಂಚಿಕೆ ಮಾಡಿಕೊಳ್ಳಲು ಬಯಸಿದರೆ ಪ್ರತ್ಯೆಕ ಸಭೆಯಲ್ಲಿ ಅವಕಾಶ ನೀಡುತ್ತೇವೆಂದು ಶಂಕರ್ ಮಾತು ಮುಂದುವರೆಸುವುದಕ್ಕೆ ಕಡಿವಾಣ ಹಾಕಿದರು.