ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿಜಿಎಂಎಲ್ ಅದಿರು ಕಳವು ಪ್ರಕರಣಕ್ಕೆ ಹೊಸ ತಿರುವು

Srinivasa Murthy VN
Updated On : 29 Aug 2013, 12:46 pm

ಕೆಜಿಎಫ್ ಪೊಲೀಸ್ ಅಧಿಕಾರಿ ರಾಜಣ್ಣ, ಬಿಜಿಎಂಎಲ್ ಆಡಳಿತಾಧಿಕಾರಿ ಸಂಪತ್‌ಕುಮಾರ್‌ರಿಂದ ಕಳ್ಳತನದ ಸಂಚು: ರಾವತ್ ಪುತ್ರಿಯರ ಆರೋಪ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯ ಮೈಸೂರು ಮಿಲ್‌ನೊಳಗೆ ಲಕ್ಷಾಂತರ ಬೆಲೆ ಬಾಳುವ ಚಿನ್ನದ ಅದಿರು ಕಳವು ಮಾಡಲು ಯತ್ನಿಸಿದ ಮೂವರು ಬಿಜಿಎಂಎಲ್ ಭದ್ರತಾ ಸಿಬ್ಬಂದಿ ಸೇರಿದಂತೆ ಇತರೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದ ಹಿನ್ನೆಲೆಯಲ್ಲಿ ಕಳ್ಳರೊಂದಿಗೆ ಶಾಮೀಲಾಗಿ ಅವರಿಂದ ದೂರವಾಣಿ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪೊಲೀಸ್ ಉಪ ರಕ್ಷಣಾಧಿಕಾರಿ ತಂಡ ಬಿಜಿಎಂಎಲ್ ಹೆಚ್ಚುವರಿ ಭದ್ರತಾಧಿಕಾರಿ ಆನಂದ್‌ಸಿಂಗ್ ರಾವತ್ ಅವರನ್ನು ಮನೆಯಲ್ಲಿ ಬಂಧಿಸಿ, ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸರಿಂದ ಬಂಧಿಸಲ್ಪಟ್ಟಿರುವ ತಮ್ಮ ತಂದೆ ಆನಂದ್‌ಸಿಂಗ್ ರಾವತ್ ಬಿಜಿಎಂಎಲ್ ಕಾರ್ಖಾನೆಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಅವರು ಯಾವುದೇ ಕಾರಣಕ್ಕೂ ಬಿಜಿಎಂಎಲ್ ಆಸ್ತಿಯನ್ನು ಕಬಳಿಸಲು ಯತ್ನಿಸಿಲ್ಲ. ಕೆಜಿಎಫ್ ಪೊಲೀಸ್ ಉಪ ರಕ್ಷಣಾಧಿಕಾರಿ ಎಚ್.ಪಿ. ರಾಜಣ್ಣ ಹಾಗೂ ಬಿಜಿಎಂಎಲ್ ಆಡಳಿತಾಧಿಕಾರಿ ಸಂಪತ್‌ಕುಮಾರ್ ಕಳ್ಳತನದ ಸಂಚು ರೂಪಿಸಿದ್ದಾರೆ. ತಮ್ಮ ತಂದೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭದ್ರತಾಧಿಕಾರಿ ಅವರ ಪುತ್ರಿಗಳಾದ ದೀಕ್ಷಾ ಹಾಗೂ ಸುಜಾತಾ ರಾವತ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಆ.17ರಂದು ಮಾರಿಕುಪ್ಪಂ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರುವ ಬಿಜಿಎಂಎಲ್ ಮೈಸೂರು ಮಿಲ್‌ನಲ್ಲಿ ಚಿನ್ನ ಮಿಶ್ರಿತ ಮಣ್ಣಿನ ಅದಿರು ದರೋಡೆ ಮಾಡಲು ಯತ್ನಿಸಿದ 17 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
 ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸಪೆಟ್, ಡಿವೈಎಸ್ಪಿ ರಾಜಣ್ಣ ಅವರಿಗೆ ಒಪ್ಪಿಸಲಾಗಿತ್ತು. ತಮ್ಮ ತಂದೆ ಗಡಿ ಭದ್ರತಾ ದಳದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಗಣಿ ಸಚಿವಾಲಯ ಅವರನ್ನು ಬಿಜಿಎಂಎಲ್ ಚಿನ್ನದ ಗಣಿ ಭದ್ರತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. 2001ರಲ್ಲಿ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಬಿಜಿಎಂಎಲ್‌ನ ವಸ್ತುಗಳು ಕಾಣೆಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ಗಣಿ ಸಚಿವಾಲಯ ಆದೇಶಿಸಿತ್ತು.
ಒತ್ತಡಕ್ಕೆ ಮಣಿಯದೆ ಇದ್ದಾಗ ಮೈಸೂರು ಮಿಲ್‌ನಲ್ಲಿ ಕಳ್ಳರ ಜೊತೆಯಲ್ಲಿ ಆಡಳಿತಾಧಿಕಾರಿ ಸಂಪತ್‌ಕುಮಾರ್ ಹಾಗೂ ಕೆಲವು ನಿವೃತ್ತ ಬಿಜಿಎಂಎಲ್ ಅಧಿಕಾರಿಗಳು ಚಿನ್ನದ ಕಳ್ಳತನ ಒಳ ಸಂಚು ರೂಪಿಸಿ ನಮ್ಮ ತಂದೆಯ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.
ತಮ್ಮ ತಂದೆಯವರು ಹಲವು ಬಾರಿ ಬಿಜಿಎಂಎಲ್‌ನ ಮೈಸೂರು ಮಿಲ್‌ನಲ್ಲಿ ನಡೆದಿರುವ ಚಿನ್ನದ ಅದಿರು ಕಳುವಿನ ಬಗ್ಗೆ ವಿಚಾರಣೆಗೆ ನಾನು ಎಂದಿಗೂ ಸಿದ್ಧನಿದ್ದೇನೆ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಅವರಿಗೆ ಪತ್ರ ಬರೆದಿದ್ದು ಕಾನೂನಡಿ ವಿಚಾರಣೆಗೆ ಒಪ್ಪಿದರೂ ಸಹ ತಮ್ಮ ತಂದೆಯ ಪತ್ರವನ್ನು ಕಡೆಗಣಿಸಿ ಕಾನೂನು ಉಲ್ಲಂಘಿಸಿ ಒಬ್ಬ ಹೆಣ್ಣು ಮಗಳು ಎನ್ನದೆ ನನ್ನ ಮೇಲೆ ಹಲ್ಲೆ ಮಾಡಿ ತಮ್ಮ ತಂದೆ ಅವರನ್ನು ಕರೆದುಕೊಂಡು ಹೋಗಿ ಬಂಧಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಲಾಗಿದೆ.
ಆದ್ದರಿಂದ ಈ ಪ್ರಕರಣದ ವಿಚಾರಣೆಯನ್ನು ಕೆಜಿಎಫ್ ಪೊಲೀಸ್ ಅಧಿಕಾರಿಗಳನ್ನು ಕೈಬಿಟ್ಟು ಬೇರೆ ಜಿಲ್ಲೆಯ ಅಧಿಕಾರಿಗಳಿಗೆ ಒಪ್ಪಿಸಿ ಈಗಾಗಲೇ ಬಂಧಿಸಿರುವ ಆರೋಪಿಗಳನ್ನು ಮರು ವಿಚಾರಣೆಗೆ ಒಳಪಡಿಸಿದರೆ ನಿಜಾಂಶ ಹೊರಬರುತ್ತದೆ ಎಂದು ಬಿಜಿಎಂಎಲ್ ಭದ್ರಾತಾಧಿಕಾರಿ ಆನಂದ್‌ಸಿಂಗ್ ರಾವತ್ ಅವರ ಪುತ್ರಿಗಳಾದ ದೀಕ್ಷಾ ಹಾಗೂ ಸುಜಾತಾ ರಾವತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement